ಬೀದರ್ : ಬೀದರ್ ನಲ್ಲಿ ಭೀಕರವಾದ ಅಗ್ನಿ ಅವಘಡ ಸಂಭವಿಸಿದ್ದು, ಆಕಸ್ಮಿಕ ಬೆಂಕಿ ಹೊತ್ತಿಕೊಂಡಿರುವ ಪರಿಣಾಮ 14 ಎಕರೆ ಜೋಳ, 6 ಎಕರೆಯಲ್ಲಿ ಬೆಳೆದಿದ್ದ ಕಬ್ಬು, ಪರಂಗಿ ಹಣ್ಣು ಜೊತೆಗೆ 120 ಮಾವಿನ ಗಿಡಗಳು ಬೆಂಕಿಗಾಹುತಿಯಾಗಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ಪಟ್ಟಣದ ಹೊರವಲಯದ ತೋಟದಲ್ಲಿ ನಡೆದಿದೆ.
ಸುಮಾರು 120 ಮಾವಿನ ಗಿಡಗಳಿಗೆ ಬೆಂಕಿ ತಗುಲಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ. ಜೊತೆಗೆ ಅಕ್ಕಪಕ್ಕದ ಹೊಲದಲ್ಲಿನ ಬೆಳೆಗಳಿಗೂ ಹಾನಿಯಾಗಿದೆ. ಟ್ರಾನ್ಸ್‌ಫಾರ್ಮ್‌ನಲ್ಲಿನ ವಿದ್ಯುತ್ ಪ್ರವಹಸಿ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ.
ಪ್ರಶಾಂತ್ ಪಾಟೀಲ್ ಎಂಬುವವರಿಗೆ ಸೇರಿದ 6 ಎಕರೆ ಹೊಲದಲ್ಲಿ ಬೆಳೆದಿದ್ದ ಕಬ್ಬು, ಪಪ್ಪಾಯಿ, ಮಾವು ಹಾಗೂ ಭರತ್ ನಾಟೀಕರ್ ಎಂಬುವವರ 14 ಎಕರೆಯ ಜೋಳ ಸುಟ್ಟು ಭಸ್ಮವಾಗಿದೆ. ಘಟನೆ ಕುರಿತು ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.