ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಯೋಜನಾ ಮಂಜೂರಾತಿ ಸಮಿತಿಯ ಸಭೆಯಲ್ಲಿ ಒಟ್ಟು 27,607.26 ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಒಪ್ಪಿಗೆ ಕೊಡಲಾಗಿದೆ.
ಇದರಲ್ಲಿ 11 ಹೊಸ ಕೈಗಾರಿಕಾ ಯೋಜನೆಗಳು ಮತ್ತು 2 ಹೆಚ್ಚುವರಿ ಹೂಡಿಕೆ ಪ್ರಸ್ತಾವನೆಗಳು ಸೇರಿವೆ ಎಂದು ಸಭೆ ಬಳಿಕ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸುದ್ದಿಗಾರರಿಗೆ ತಿಳಿಸಿದರು.
ಒಟ್ಟು ಈ 13 ಯೋಜನೆಗಳಿಂದ 8,704 ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದಿದ್ದಾರೆ. 11 ಹೊಸ ಹೂಡಿಕೆ ಯೋಜನೆಗಳ ಪೈಕಿ ತೇಜಸ್ ನೆಟ್ವರ್ಕ್ಸ್ 542.19 ಕೋಟಿ ರೂ, ವಾಯು ಅಸೆಟ್ಸ್ 1,251 ಕೋಟಿ ರೂ, ಜಿಂದಾಲ್ ಸ್ಟೀಲ್ಸ್ 1,300.57 ಕೋಟಿ ರೂ, ಜಿಂದಾಲ್ ಎಲೆಕ್ಟ್ರಿಕಲ್ ಸ್ಟೀಲ್ 7,102 ಕೋಟಿ ರೂ, ಗ್ರಾಸಿಂ ಇಂಡಸ್ಟ್ರೀಸ್1,386 ಕೋಟಿ ರೂ, ಎಸ್ಎಫ್ಎಕ್ಸ್ ಇಂಡಿಯಾ 9,298 ಕೋಟಿ ರೂ, ಸ್ನೀಡರ್ ಎಲೆಕ್ಟ್ರಿಕ್ ಐಟಿ ಬಿಝಿನೆಸ್, ಎಚ್ಎಸ್ಎಸ್ ಟೆಕ್ಸ್ಟೈಲ್ಸ್ 740 ಕೋಟಿ ರೂ, ಸ್ನೈಡರ್ ಎಲೆಕ್ಟ್ರಿಕ್ ಬಿಸಿನೆಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 1,520.75 ಕೋಟಿ ರೂ, ಕ್ಯೂಪಿಐಎಐ ಇಂಡಿಯಾ 1,136 ಕೋಟಿ ರೂ, ಟೊಯೋಟಾ ಇಂಡಸ್ಟ್ರೀಸ್ ಎಂಜಿನ್ ಇಂಡಿಯಾ ಲಿಮಿಟೆಡ್ 1,330 ಕೋಟಿ ರೂ ಮತ್ತು ರಿಲಯನ್ಸ್ ಕನ್ಸೂಮರ್ ಪ್ರಾಡಕ್ಟ್ಸ್ 1,622 ಕೋಟಿ ರೂ. ಹೂಡಿಕೆ ಮಾಡಲಿವೆ. ಮಿಕ್ಕಂತೆ, ಎಂಬೆಸಿ ಇಂಡಸ್ಟ್ರಿಯಲ್ ಪಾರ್ಕ್ ಮತ್ತು ಬಾಲಾಜಿ ವೇಫರ್ಸ್ ಕಂಪನಿಗಳು ಕ್ರಮವಾಗಿ 80 ಮತ್ತು 298.75 ಕೋಟಿ ರೂ. ಹೆಚ್ಚುವರಿ ಬಂಡವಾಳ ತೊಡಗಿಸಲಿವೆ ಎಂದು ಅವರು ಹೇಳಿದ್ದಾರೆ.
ವಿಧಾನಸೌಧದ ಸಭಾಂಗಣದಲ್ಲಿ ನಡೆದ ಬಂಡವಾಳ ಹೂಡಿಕೆ ಆಕರ್ಷಣೆ ಸಭೆಯಲ್ಲಿ ಮುಖ್ಯಮಂತ್ರಿ ಅವರು ನೀಡಿದ ಸಲಹೆ ಸೂಚನೆಗಳು ಹೀಗಿವೆ.
• ರಾಜ್ಯದಲ್ಲಿ ಬಂಡವಾಳ ಹೂಡಿಕೆದಾರ ಸ್ನೇಹಿ ವಾತಾವರಣವನ್ನು ಇನ್ನಷ್ಟು ಉತ್ತಮಪಡಿಸಬೇಕು. ಇದಕ್ಕಾಗಿ ಭೂ ಬಳಕೆ ಬದಲಾವಣೆ ಪ್ರಕ್ರಿಯೆ ಸೇರಿದಂತೆ ವಿವಿಧ ಎನ್‌ಒಸಿಗಳ ನೀಡಿಕೆಯ ಕಾಲಮಿತಿಯನ್ನು ಕಡಿಮೆ ಮಾಡಬೇಕು. ಕಾಲಮಿತಿಯನ್ನು ಕಡಿಮೆ ಮಾಡುವ ಬಗ್ಗೆ ವಿವರವಾದ ಪ್ರಸ್ತಾವನೆಯನ್ನು ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ವಿಳಂಬಕ್ಕೆ ಅವಕಾಶ ನೀಡಬಾರದು.
• ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಅಗ್ನಿಶಾಮಕ ಇಲಾಖೆ ಅನುಮೋದನೆ ವಿಳಂಬವಾಗುತ್ತಿದ್ದು, ಇದನ್ನು ತ್ವರಿತಗೊಳಿಸಬೇಕು. ಇದಕ್ಕಾಗಿ ಮಂಡಳಿಯ ನಿಯಮಾವಳಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಬೇಕು.
• ಕೈಗಾರಿಕೆಗಳಿಗೆ ರಸ್ತೆ, ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸುವ ಕುರಿತಾಗಿ ಸಂಬಂಧಪಟ್ಟ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು.
• ರಾಜ್ಯದಲ್ಲಿ ಈ ವರ್ಷದ ಆರಂಭದಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ರೂ.10.27 ಲಕ್ಷ ಕೋಟಿ ಹೂಡಿಕೆ ಆಕರ್ಷಿಸಲಾಗಿದ್ದು, ಈಗಾಗಲೇ ಶೇ.60ರಷ್ಟು ಹೂಡಿಕೆಗಳ ಅನುಷ್ಠಾನ ಹಂತದಲ್ಲಿವೆ.
• ಸುಮಾರು ರೂ.1.5 ಲಕ್ಷ ಕೋಟಿಗೂ ಹೆಚ್ಚಿನ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು ವಿವಿಧ ಹಂತದಲ್ಲಿವೆ.
• ಸುಪ್ರೀಂಕೋರ್ಟ್ ನ ಕಾರಣ ಹೇಳಿಕೊಂಡು ಕೂರಬಾರದು. ಅಕ್ಕ ಪಕ್ಕದ ರಾಜ್ಯಗಳಿಗೂ ಇರುವುದೂ ಇದೇ ಸುಪ್ರೀಂ ಕೋರ್ಟ್. ಬೇರೆ ರಾಜ್ಯಗಳಿಗೆ ಆಗದ ಸಮಸ್ಯೆ ನಮಗೆ ಆಗುತ್ತಿದೆ ಅನ್ನುವ ಕಾರಣ ನೀಡಿದರೆ ಕ್ರಮ ಜರುಗಿಸಬೇಕಾಗತ್ತದೆ.
• ರಾಜ್ಯದಲ್ಲಿ ಕಾರ್ಯಪಡೆ ಹೆಚ್ಚಿದೆ. ಕೌಶಲ್ಯಯುತ ಕಾರ್ಮಿಕ ಬಲ ಕೂಡ ರಾಜ್ಯದಲ್ಲಿ ಹೆಚ್ಚಿದೆ. ಹೀಗಾಗಿ ಉದ್ಯೋಗ ಸೃಷ್ಟಿ ರಾಜ್ಯದಲ್ಲಿ ಹೆಚ್ಚೆಚ್ಚು ಆಗುತ್ತಿದೆ. ಕೈಗಾರಿಕೆಗಳಿಗೆ ಅನುಮತಿ ನೀಡುವ ಮತ್ತಿತರ ವಿಚಾರದಲ್ಲಿ ಪ್ರಕ್ರಿಯೆ ಇನ್ನಷ್ಟು ವೇಗ ಪಡೆಯಬೇಕು. ಇದನ್ನು ಅಧಿಕಾರಿಗಳು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು.
• ತಮಿಳುನಾಡಿನಲ್ಲಿ 51 SEZ ಗಳಿದ್ದು ಒಟ್ಟಾರೆ 8.9% ಕೊಡುಗೆ ನೀಡುತ್ತಿವೆ. ಆದರೆ, ರಾಜ್ಯದಲ್ಲಿ ಕೇವಲ 37 SEZ (special economic zone)ಗಳಿದ್ದು ನಾವು 8.2% ರಷ್ಟು ಕೊಡುಗೆ ನೀಡುತ್ತಿದ್ದೇವೆ. ಇದರಲ್ಲೂ ರಾಜ್ಯದ ಕೊಡುಗೆಯೇ ಹೆಚ್ಚಾಗಿದೆ. ಇಂಥಾ ಅನುಕೂಲಕರ ಪರಿಸ್ಥಿತಿಯನ್ನು ಗಮನಿಸಬೇಕು.
• ಹಸಿರು ಇಂಧನ ಮೂಲಗಳಿಂದ ಕೈಗಾರಿಕೆಗಳಿಗೆ ವಿದ್ಯುತ್ ಸರಬರಾಜು ಮಾಡುವ ನಿಟ್ಟಿನಲ್ಲಿ ಅಸಾಂಪ್ರದಾಯಿಕ ಇಂಧನ ಮೂಲಗಳಿಗೆ ಆದ್ಯತೆ ನೀಡಬೇಕು. ಇದಕ್ಕಾಗಿ ವ್ಯವಸ್ಥಿತ ಯೋಜನೆ ರೂಪಿಸಬೇಕು.
• ಕೇಂದ್ರ ಸರ್ಕಾರ 2 ಪ್ರಮುಖ ಕಾರ್ಮಿಕ ಸುಧಾರಣೆಗಳ ಅನುಷ್ಠಾನವನ್ನು ಪ್ರಸ್ತಾಪಿಸಿದೆ. ಕಾರ್ಮಿಕರ ಕೆಲಸದ ಅವಧಿಯನ್ನು ಮರು ನಿಗದಿಪಡಿಸುವ ಸಂದರ್ಭದಲ್ಲಿ ಕಾರ್ಮಿಕರ ಹಿತವನ್ನು ಗಮನದಲ್ಲಿಡಲಾಗುವುದು.
• ಏಕಗವಾಕ್ಷಿ ವ್ಯವಸ್ಥೆಯಡಿ ಅರ್ಜಿಗಳ ವಿಲೇವಾರಿ ಆಗುತ್ತಿಲ್ಲ ಎಂದು ದೂರುಗಳಿವೆ. ಎಲ್ಲಾ ಸೇವೆಗಳನ್ನು ನೀಡಲು ಕ್ರಮ ಕೈಗೊಳ್ಳಬೇಕು. ಪ್ರಸ್ತುತ 29 ಸೇವೆಗಳು ಏಕಗವಾಕ್ಷಿ ವ್ಯವಸ್ಥೆಯಿಂದ ಹೊರಗಿದ್ದು, ಅವುಗಳನ್ನು ಸಹ ಇದರಡಿ ತರಬೇಕು. ಎಲ್ಲಾ ಅರ್ಜಿಗಳನ್ನು ಏಕಗವಾಕ್ಷಿ ವ್ಯವಸ್ಥೆಯಡಿ ಏಕೀಕೃತ ವಿಲೇವಾರಿಗೆ ಕ್ರಮ.
• ರಾಜ್ಯದಲ್ಲಿ ಬಂಡವಾಳ ಹೂಡಿಕೆ ಹೆಚ್ಚಾದರೆ ಮಾತ್ರ ಉದ್ಯೋಗ ಸೃಷ್ಟಿ ಮಾಡಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಹೂಡಿಕೆಸ್ನೇಹಿ ವಾತಾವರಣವನ್ನು ಉತ್ತಮ ಪಡಿಸಲು ಎಲ್ಲರೂ ಸಮನ್ವಯದಿಂದ ಶ್ರಮಿಸಬೇಕು.
 
		



 




