ಬೆಂಗಳೂರು : ನೌಕರರ ರಾಜ್ಯ ವಿಮಾ ನಿಗಮ (ESIC)ದ ಅಡಿಯ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಒಂದು ವರ್ಷ ಕಡ್ಡಾಯವಾಗಿ ಇಎಸ್ಐಸಿಗಳಲ್ಲಿ ಸೇವೆ ಸಲ್ಲಿಸಬೇಕು. ಅಲ್ಲದೆ, 1 ವರ್ಷ ಕಡ್ಡಾಯ ಸೇವೆ ನೀಡುವುದಾಗಿ ವಿದ್ಯಾರ್ಥಿಗಳು ಬಾಂಡ್ ನೀಡಿದ್ದಾರೆ. ಕಡ್ಡಾಯ ಸೇವೆ ಮಾಡಲಾಗದವರು 5 ಲಕ್ಷ ರೂ. ಶುಲ್ಕ ನೀಡಲೂ ಅವಕಾಶವಿದೆ. ಬಾಂಡ್ ಪಡೆಯುವುದರಿಂದ ವಿದ್ಯಾರ್ಥಿಗಳ ಹಕ್ಕಿನ ಹರಣವಾಗಲಿದೆ ಎನ್ನಲಾಗುವುದಿಲ್ಲ ಎಂದು ಹೈಕೋರ್ಟ್ ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ಈ ಸಂಬಂಧ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಇಎಸ್ಐಸಿ ಸಲ್ಲಿಸಿದ್ದ ಮೇಲ್ಮನವಿ ಮಾನ್ಯ ಮಾಡಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ವಿಭಾಗೀಯಪೀಠ ಈ ಆದೇಶ ನೀಡಿದ್ದು, ಏಕಸದಸ್ಯ ಪೀಠದ ಆದೇಶವನ್ನು ರದ್ದುಪಡಿಸಿದೆ.ಮೊದಲು 5 ವರ್ಷಗಳ ಬಾಂಡ್ ಇತ್ತು, ನಂತರ 2020ರಿಂದ 1 ವರ್ಷಕ್ಕೆ ಪರಿವರ್ತಿಸಲಾಗಿದ್ದು, ಇದು ಸಂವಿಧಾನದ ಕಲಂ 19(1)(ಜಿ) ಅನ್ವಯ ವೃತ್ತಿ ಆಯ್ಕೆಯ ಹಕ್ಕು ಅಥವಾ ಕಲಂ 23 ಜೀತ ಕಾರ್ಮಿಕ ನಿಷೇಧದಡಿ ವಿದ್ಯಾರ್ಥಿಗಳ ಹಕ್ಕುಗಳನ್ನು ಉಲ್ಲಂಘನೆಯಾಗದು.
ಸಬ್ಸಿಡಿ ದರದಲ್ಲಿ ಶಿಕ್ಷಣ ಪಡೆಯುವ ಭಾಗವಾಗಿ ಸೇವಾ ಬಾಂಡ್ ಅನ್ನು ಜಾರಿಗೊಳಿಸುವುದು ಬಾಂಡೆಡ್ ಲೇಬರ್ ಎಂಬ ತೀರ್ಮಾನಕ್ಕೆ ಬರಲು ಕಾನೂನಿನಲ್ಲಿ ಯಾವುದೇ ಆಧಾರವಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.ಶಿಕ್ಷಣದ ವೆಚ್ಚವನ್ನು ಭರಿಸಲು ವಿದ್ಯಾರ್ಥಿಗಳು ಅಧ್ಯಯನ ಸಾಲಗಳನ್ನು ಪಡೆಯುವುದು ಸಾಮಾನ್ಯವಾಗಿದೆ. ವೈದ್ಯಕೀಯ ಪದವಿ ಅರ್ಹತೆಗಳನ್ನು ಪಡೆದ ನಂತರ ಸಾಲವನ್ನು ಮರುಪಾವತಿಸುವ ಜವಾಬ್ದಾರಿ ಬಾಂಡೆಡ್ ಲೇಬರ್ ಎಂದು ಹೇಳಲಾಗುವುದಿಲ್ಲ. ಆದರೂ ಆದಾಯದ ಗಣನೀಯ ಭಾಗವನ್ನು ವಿದ್ಯಾರ್ಥಿಗಳು ಸಾಲ ತೀರಿಸಲು ಬಳಸಬಹುದು ಎಂದು ಪೀಠ ತನ್ನ ಆದೇಶದಲ್ಲಿ ವಿವರಿಸಿದೆ








