ಬೆಂಗಳೂರು : ಇನ್ನೇನು ಕೆಲವೇ ಕ್ಷಣಗಳಲ್ಲಿ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು ಈ ನೆಲೆಯಲ್ಲಿ ಇದೀಗ ರಾಜ್ಯಪಾಲ ಥಾವರ ಚಂದ್ ಗೆಹ್ಲೊಟ್ ಅಧಿವೇಶನದ ಕುರಿತು ಭಾಷಣ ಮಾಡಲಿದ್ದಾರೆ. ಅಧಿವೇಶನದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬೀಳಲು ಪಕ್ಷಗಳು ತುದಿಗಾಲಲ್ಲಿ ನಿಂತಿದ್ದು, ಇದೆ ವೇಳೆ ವಿಪಕ್ಷ ನಾಯಕ ಆರ್. ಅಶೋಕ್ ಗ್ಯಾರಂಟಿಗಳಿಂದ ಕಾಂಗ್ರೆಸ್ ಬಿಕ್ಷಾ ಪಾತ್ರೆ ಹಿಡಿಯುವ ಹಂತಕ್ಕೆ ಬಂದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಪ್ರಜಾಪ್ರಭುತ್ವವನ್ನು ದಮನ ಮಾಡುತ್ತಿದೆ. ಈಗ ರಾಜ್ಯಪಾಲರ ಹಲವು ಅಧಿಕಾರ ಮೊಟಕು ಮಾಡುತ್ತಿದೆ. ರಾಜ್ಯಪಾಲರಿಗೆ ಕಾಂಗ್ರೆಸ್ ಸರ್ಕಾರ ಅಪಮಾನ ಮಾಡುತ್ತಿದೆ.ಹಲವು ಮಸೂದೆಗಳ ವಿಚಾರದಲ್ಲಿ ರಾಜ್ಯಪಾಲರು ಸ್ಪಷ್ಟನೆ ಕೇಳಿದ್ದಾರೆ. ರಾಜ್ಯಪಾಲರ ಪ್ರಶ್ನೆಗೆ ಸ್ಪಷ್ಟನೆ ಕೊಡದೆ ಬೊಬ್ಬೆ ಹೊಡೆಯುತ್ತಿದ್ದಾರೆ.
ಗ್ಯಾರಂಟಿಗಳಿಂದ ಕಾಂಗ್ರೆಸ್ ಬಿಕ್ಷಾ ಪಾತ್ರೆ ಹಿಡಿಯುವ ಹಂತಕ್ಕೆ ಬಂದಿದೆ. ಯಾವ ಮುಖ ಇಟ್ಕೊಂಡು ಸರ್ಕಾರದ ಸಾಧನೆ ಹೇಳಿಕೊಳುತ್ತೀರಿ? ನಾವು ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸುವುದಿಲ್ಲ. ಶಾಸಕರ ಭವನದಿಂದ ವಿಧಾನಸೌಧದ ವರೆಗೆ ಪಾದಯಾತ್ರೆ ಮಾಡುತ್ತೇವೆ ಎಂದು ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದರು.