ಬೆಂಗಳೂರು : 16 ವರ್ಷದ ಬಾಲಕಿ ಮೇಲೆ ಪಾಪಿಯೊಬ್ಬ ನಿರಂತರವಾಗಿ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಸಿದಂತೆ ಹೈಕೋರ್ಟ್ ಇದೀಗ 26 ವಾರಗಳ ಗರ್ಭ ಧರಿಸಿದ್ದ ಬಾಲಕಿಯ ಗರ್ಭಪಾತಕ್ಕೆ ಅನುಮತಿ ನೀಡಿದೆ.ಅಲ್ಲದೇ ಅಪ್ರಾಪ್ತೆಯ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇದ್ದರೆ ಗರ್ಭಪಾತ ಮಾಡಬೇಕೇ, ಬೇಡವೇ ಎಂಬುದನ್ನು ವೈದ್ಯರು ನಿರ್ಧರಿಸಬಹುದು ಎಂದು ಹೈಕೋರ್ಟ್ ಹೇಳಿದೆ.
ಸಂತ್ರಸ್ತೆ ಪರವಾಗಿ ಅವರ ತಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ನ್ಯಾಯಪೀಠ ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ಮಂಡಳಿಯ ಅಭಿಪ್ರಾಯ ಪಡೆದ ನಂತರ ಈ ಆನುಮತಿ ನೀಡಿದೆ. ಅಪ್ರಾಪ್ತೆಗೆ ವೈದ್ಯಕೀಯ ಗರ್ಭಪಾತ ನಿಯಮಗಳು 1971 ಆಸ್ಪತ್ರೆಯ ವೆಚ್ಚದಲ್ಲಿ ಗರ್ಭಪಾತ ಪ್ರಕ್ರಿಯೆ ಸರ್ಕಾರಿ ವೆಚ್ಚದಲ್ಲಿ ನಡೆಸಬೇಕು.
ಅಲ್ಲದೇ, ಚಿಕಿತ್ಸೆಗಾಗಿ ಸಂತ್ರಸ್ತೆ ಮತ್ತವರ ಪೋಷಕರು ಆಸ್ಪತ್ರೆಗೆ ಕರೆದೊಯ್ಯಲು ಮತ್ತು ಅಲ್ಲಿಂದ ಮನೆಗೆ ಕರೆದುಕೊಂಡು ಬರುವುದು ಹಾಗೂ ಹೆಚ್ಚುವರಿ ಚಿಕಿತ್ಸೆಗಾಗಿ ಮತ್ತೊಂದೆಡೆ ಹೋಗಬೇಕಾದರೂ ಸ್ಥಳೀಯ ಪೊಲೀಸ್ ಠಾಣೆಯಿಂದ ಉಚಿತವಾಗಿ ವಾಹನವನ್ನು ವ್ಯವಸ್ಥೆ ಮಾಡಬೇಕು. ಆದೇಶಕ್ಕೆ ಸಂಬಂಧಿಸಿದಂತೆ ಮುಂದಿನ ಎರಡು ವಾರಗಳಲ್ಲಿ ವಸ್ತುಸ್ಥಿತಿ ವರದಿ ಸಲ್ಲಿಸಬೇಕು ಎಂದು ಪೀಠ ತಿಳಿಸಿದೆ.
ಅರ್ಜಿದಾರ ಅಪ್ರಾಪ್ತೆಯ ಜೀವಕ್ಕೆ ಹಾನಿಯಾಗುವಂತಿದ್ದರೆ ಅಂತಹ ಕಾರ್ಯವಿಧಾನವನ್ನು ಮುಂದುವರೆಸಬೇಕೇ, ಬೇಡವೇ ಎಂಬುದರ ಕುರಿತು ವೈದ್ಯರು ನಿರ್ಧಾರ ತೆಗೆದುಕೊಳ್ಳಬಹುದಾಗಿದೆ. ಗರ್ಭಪಾತ ಮಾಡಿದಲ್ಲಿ ಭ್ರೂಣವನ್ನು ಡಿಎನ್ಎ ಪರೀಕ್ಷೆಗಾಗಿ ಬೆಂಗಳೂರಿನ ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಬೇಕು ಎಂದು ಪೀಠ ಹೇಳಿದೆ.