ನ್ಯೂಯಾರ್ಕ್: ಅಮೆರಿಕದ ನ್ಯೂಯಾರ್ಕ್ನಲ್ಲಿರುವ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ (LaGuardia Airport) ಸೋಮವಾರ ಭೀಕರ ಅಪಘಾತ ಸಂಭವಿಸಿದೆ. ಕೆನಡಾದ ಮಾಂಟ್ರಿಯಲ್ನಿಂದ ಬಂದಿಳಿದ ‘ಏರ್ ಕೆನಡಾ ಎಕ್ಸ್ಪ್ರೆಸ್’ ವಿಮಾನವು ರನ್ವೇನಲ್ಲಿ ಅಗ್ನಿಶಾಮಕ ದಳದ ವಾಹನಕ್ಕೆ (Fire Truck) ನೇರವಾಗಿ ಡಿಕ್ಕಿ ಹೊಡೆದಿದೆ. ಈ ಘಟನೆಯ ಬೆನ್ನಲ್ಲೇ ವಿಮಾನ ನಿಲ್ದಾಣದ ಎಲ್ಲಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಹತ್ತಾರು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಅಪಘಾತದ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಟಿಸಿ (ATC) ಗೋಪುರದಲ್ಲಿ ಅಧಿಕಾರಿಗಳು ‘ನಿಲ್ಲಿಸಿ, ನಿಲ್ಲಿಸಿ’ (Stop, Stop) ಎಂದು ಕಿರುಚುತ್ತಿರುವ ಆಡಿಯೋ ಲಭ್ಯವಾಗಿದೆ.
ಏರ್ ಕೆನಡಾ ಎಕ್ಸ್ಪ್ರೆಸ್ಗೆ ಸೇರಿದ CRJ-900 ವಿಮಾನವು ರನ್ವೇ 4ರಲ್ಲಿ ಇಳಿಯುತ್ತಿದ್ದಾಗ ಅಡ್ಡ ಬಂದ ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಿಮಾನದ ಮುಂಭಾಗ (Nose) ಸಂಪೂರ್ಣ ಜಖಂಗೊಂಡಿದೆ.ಈ ಅಪಘಾತದಲ್ಲಿ ಕನಿಷ್ಠ ಇಬ್ಬರು ಅಗ್ನಿಶಾಮಕ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು 70ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂಬ ಪ್ರಾಥಮಿಕ ವರದಿಗಳು ಬಂದಿವೆ. ನಾಲ್ವರು ಅಗ್ನಿಶಾಮಕ ಸಿಬ್ಬಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ವಿಮಾನವು ರನ್ವೇಗೆ ಬರುತ್ತಿದ್ದಂತೆಯೇ ಎಟಿಸಿ ಅಧಿಕಾರಿಗಳು ಅಗ್ನಿಶಾಮಕ ಟ್ರಕ್ ಸಂಖ್ಯೆ 1ಕ್ಕೆ “ನಿಲ್ಲು ಟ್ರಕ್ 1, ನಿಲ್ಲು, ನಿಲ್ಲು!” ಎಂದು ಎಚ್ಚರಿಕೆ ನೀಡುತ್ತಿರುವುದು ಆಡಿಯೋದಲ್ಲಿ ದಾಖಲಾಗಿದೆ. ಆದರೆ ಎಚ್ಚರಿಕೆ ಸಿಗುವ ಮೊದಲೇ ಡಿಕ್ಕಿ ಸಂಭವಿಸಿದೆ. ಎಫ್ಎಎ (FAA) ಆದೇಶದ ಮೇರೆಗೆ ಲಾಗಾರ್ಡಿಯಾ ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಎಲ್ಲಾ ವಿಮಾನಗಳನ್ನು ಬೇರೆ ನಿಲ್ದಾಣಗಳಿಗೆ ತಿರುಗಿಸಲಾಗಿದ್ದು, ಸಂಜೆವರೆಗೂ ಕಾರ್ಯಾಚರಣೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
ರನ್ವೇನಲ್ಲಿ ವಿಮಾನ ಇಳಿಯುವ ಸಮಯದಲ್ಲಿ ಅಗ್ನಿಶಾಮಕ ವಾಹನ ಅಲ್ಲಿಗೆ ಬಂದಿದ್ದು ಹೇಗೆ ಎಂಬ ಬಗ್ಗೆ ಗಂಭೀರ ತನಿಖೆ ಆರಂಭವಾಗಿದೆ.








