ನವದೆಹಲಿ: ಜನಪ್ರಿಯ ಹಾಸ್ಯನಟ ರಾಜು ಶ್ರೀವಾಸ್ತವ ಅವರು ತಮ್ಮ 58 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಯಲ್ಲಿ ಹಾಸ್ಯನಟ ಕೊನೆಯುಸಿರೆಳೆದರು. ಆಗಸ್ಟ್ 10 ರಂದು ಹೃದಯಾಘಾತಕ್ಕೊಳಗಾದ ನಂತರ ರಾಜು ಅವರನ್ನು ಏಮ್ಸ್ ಗೆ ದಾಖಲಿಸಲಾಗಿತ್ತು. ಅದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.
ರಾಜು ಶ್ರೀವಾತ್ಸವ್ ಅವರು ತಮ್ಮ ಸಮಯೋಚಿತ ಜೋಕುಗಳು ಮತ್ತು ಹಾಸ್ಯದ ಮೂಲಕ ಸ್ಟ್ಯಾಂಡ್-ಅಪ್ ಹಾಸ್ಯ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. 2005 ರಲ್ಲಿ ಮೊದಲ ಸೀಸನ್ ಪ್ರಥಮ ಪ್ರದರ್ಶನದೊಂದಿಗೆ ಅವರು ಮೊದಲ ಬಾರಿಗೆ ಸ್ಟ್ಯಾಂಡ್-ಅಪ್ ಕಾಮಿಡಿ ಟ್ಯಾಲೆಂಟ್ ಹಂಟ್ ಶೋ ‘ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್’ ಮೂಲಕ ಖ್ಯಾತಿ ಗಳಿಸಿದರು. “ಮೈನೆ ಪ್ಯಾರ್ ಕಿಯಾ”, “ಬಾಜಿಗರ್”, “ಬಾಂಬೆ ಟು ಗೋವಾ” (ರಿಮೇಕ್) ಮತ್ತು “ಆಮ್ದಾನಿ ಅತ್ತಾನಿ ಖರ್ಚಾ ರುಪಾಯ” ನಂತಹ ಹಿಂದಿ ಚಲನಚಿತ್ರಗಳಲ್ಲಿ ಅವರು ಕಾಣಿಸಿಕೊಂಡರು. ಅವರು “ಬಿಗ್ ಬಾಸ್” ಸೀಸನ್ ಮೂರರಲ್ಲಿ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಅವರು ಉತ್ತರ ಪ್ರದೇಶ ಚಲನಚಿತ್ರ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದರು.