ಬೆಂಗಳೂರು : ಗುತ್ತಿಗೆದಾರನಿಗೆ ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಹಾಕಿರುವ ಆರೋಪದ ಅಡಿ ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಇದೀಗ ಪೊಲೀಸರ ಕಸ್ಟಡಿಯಲ್ಲಿದ್ದು, ಇಂದು ಅವರಿಗೆ ದಿಡೀರನೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಆಡಿಯೋ ವೈರಲ್ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದ ಮುನಿರತ್ನಗೆ, ಕೆಲ ಗಂಟೆಗಳ ಹಿಂದೆಯೇ ಪೊಲೀಸರು ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್ ಮಾಡಿಸಿದ್ದರು.ಈ ವೇಳೆ ಅವರಿಗೆ ಅನಾರೋಗ್ಯವೆಂದು ಪೊಲೀಸರಿಗೆ ಆಸ್ಪತ್ರೆಯ ವೈದ್ಯರು ವರದಿ ನೀಡಿದ್ದರು. ಆಡಿಯೋ ವೈರಲ್ ಆದ ಬೆನ್ನಲ್ಲೇ ಮುನಿರತ್ನರನ್ನು ಪೊಲೀಸರು ಅರೆಸ್ಟ್ ಮಾಡಿದ್ದರು.
ಬಳಿಕ ಜಡ್ಜ್ ಮುಂದೆ ಹಾಜರು ಪಡಿಸಿದ್ದಾಗ, ತಮಗೆ ಹೃದಯ ಸಂಬಂಧಿ, ಹರ್ನಿಯಾ, ಡಯಾಬಿಟಿಸ್ ಸಮಸ್ಯೆ ಇದೆ ಎಂದು ಹೇಳಿದ್ದರು. ಅದರಂತೆಯೇ ವೈದ್ಯಕೀಯ ತಪಾಸಣೆ ಮಾಡಿದ ಬಳಿಕ ಮುನಿರತ್ನಗೆ ಅನಾರೋಗ್ಯವಿದೆ ಎಂದು ವೈದ್ಯರು ರಿಪೋರ್ಟ್ ಕೊಟ್ಟಿದ್ದರು.
ಇದರ ಬೆನ್ನಲ್ಲೇ ಗುತ್ತಿಗೆದಾರ ಚಲುವರಾಜು ಇಂದು ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದು, ನಾಳೆ ಮುನಿರತ್ನ ಅವರದ್ದು ಎನ್ನಲಾದ ಇನ್ನೂ ಎರಡು ಆಡಿಯೋಗಳನ್ನು ರಿಲೀಸ್ ಮಾಡುತ್ತೇನೆ. ಹನುಮಂತರಾಯಪ್ಪ ಜೊತೆ ಮಾತನಾಡಿದ ಆಡಿಯೋ ಹಾಗೂ 30% ಕಮಿಷನ್ ವಿಚಾರದ ಆಡಿಯೋ ಬಿಡುಗಡೆ ಮಾಡುತ್ತೇನೆ ನಾಳೆ ಎರಡು ಆಡಿಯೋಗಳನ್ನು ರಿಲೀಸ್ ಮಾಡುತ್ತೇನೆ ಎಂದು ಚಲುವರಾಜು ಸ್ಫೋಟಕ ಹೇಳಿಕೆ ನೀಡಿದ್ದಾರೆ.