ಕೊಪ್ಪಳ : ಸದ್ಯ ರಾಜ್ಯದಲ್ಲಿ ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಮಾತ್ರ ರಾಜ್ಯದ ಎಲ್ಲಾ ಕಡೆ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ. ಇದೀಗ ಆರ್ಥಿಕ ಪರಿಸ್ಥಿತಿ ಸುಧಾರಣೆ ಆದರೆ ಗಂಡು ಮಕ್ಕಳಿಗೂ ಉಚಿತ ಪ್ರಯಾಣದ ಕುರಿತು ಚಿಂತನೆ ನಡೆಸಲಾಗುತ್ತೆ ಎಂದು ಪ್ರೌಢಶಾಲಾ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿಕೆ ನೀಡಿದರು.
ಇಂದು ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹಿರೇವಂಕಲ ಕುಂಟ ಗ್ರಾಮದಲ್ಲಿ ಬಾಲಕಿಯರ ಪ್ರೌಢಶಾಲೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಕಸ್ಮಾತ್ ಆರ್ಥಿಕ ಪರಿಸ್ಥಿತಿ ಸುಧಾರಣೆ ಆದರೆ ಗಂಡು ಮಕ್ಕಳಿಗೂ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗುತ್ತದೆ. ನಾವು ಯಾವುದೇ ಗ್ಯಾರೆಂಟಿ ಯೋಜನೆಗಳಿಗೆ ವಿರೋಧ ಮಾಡುತ್ತಿಲ್ಲ. ಅಭಿವೃದ್ಧಿ ಕೆಲಸದ ಬಗ್ಗೆ ಮಾತನಾಡಿದರೆ ಏನೇನೋ ಮಾತನಾಡುತ್ತಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಗ್ಗೆ ಎಷ್ಟೋ ಟೀಕೆ ಮಾಡಿದರು ಎಂದು ಹೇಳಿಕೆ ನೀಡಿದರು.
ಸರ್ಕಾರದಲ್ಲಿ ಹಣ ಕಡಿಮೆ ಇದೆ ಎಂದು ಯಾರೂ ಹೇಳಿದರು? ಹೆಣ್ಣು ಮಕ್ಕಳಿಗೆ 2000 ಕೊಡುತ್ತೀರಿ, ನಮಗ್ಯಾಕೆ ಇಲ್ಲ ಅಂದರು. ನಮ್ಮ ಸರ್ಕಾರದಲ್ಲಿ ಅನುದಾನದ ಕೊರತೆ ಇಲ್ಲ. ಅಲ್ಲಿ ನಾನು ತಮಾಷೆಯಾಗಿ ಮಾತಾಡಿದೆ ನಮ್ಮ ತಲೆಯ ಮೇಲೆ ಬಿಜೆಪಿಯವರು 2 ಲಕ್ಷ ಕೋಟಿ ರೂಪಾಯಿ ಹಾಕಿದರು. ನಮ್ಮ ಸರಕಾರದಲ್ಲಿ ಅಭಿವೃದ್ಧಿಗೆ ಹಿನ್ನಡೆ ಆಗಿಲ್ಲ ಇನ್ನು ಮೂರು ವರ್ಷ ಸಿದ್ದರಾಮಯ್ಯನವರೇ ಸಿಎಂ ಆಗಿ ಇರುತ್ತಾರೆ. ಯಾವುದೇ ಬದಲಾವಣೆ ಇಲ್ಲ ಹಣಕಾಸು ಮಂತ್ರಿ ಆದರೆ ಇನ್ನೂ ಹೆಚ್ಚಿನ ಗ್ಯಾರಂಟಿ ಕೊಡುತ್ತೇವೆ ಎಂದು ತಿಳಿಸಿದರು.
ನಿನ್ನೆ ತಾನೆ ರಸ್ತೆ ಬೇಕು ಅಂದರೆ ಗ್ಯಾರಂಟಿ ಯೋಜನೆಗಳನ್ನು ಬಂದ್ ಮಾಡಬೇಕಾಗುತ್ತದೆ ಎಂದು ಹೇಳಿಕೆ ನೀಡಿದ್ದ ಬಸವರಾಜ್ ರೆಡ್ಡಿ, ಬಳಿಕ ನಾನು ಹಾಗೆ ಹೇಳಿಯೇ ಇಲ್ಲ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಬಂದ್ ಮಾಡುವುದಿಲ್ಲ ಎಂದು ತಮ್ಮ ಹೇಳಿಕೆಗೆ ಉಲ್ಟಾ ಹೊಡೆದರು. ಇದೀಗ ಆರ್ಥಿಕ ಪರಿಸ್ಥಿತಿ ಸುಧಾರಣೆ ಆದರೆ ಗಂಡು ಮಕ್ಕಳಿಗೂ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸುವ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದು ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.