ಬೆಂಗಳೂರು: ಬೆಸ್ಕಾಂ (BESCOM) ಜಾಗೃತ ದಳದ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದಕ್ಷ ಪೊಲೀಸ್ ಅಧಿಕಾರಿ ಲಾವಣ್ಯ (39) ಅವರು ಶನಿವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.
ದಕ್ಷ ಅಧಿಕಾರಿಯ ಅಗಲಿಕೆ:
ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ದೊಡ್ಡಗಂಜೂರು ಗ್ರಾಮದವರಾದ ಲಾವಣ್ಯ ಅವರು, ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು. ಸದ್ಯ ಬೆಸ್ಕಾಂ ಜಾಗೃತ ದಳದ ಎಸ್ಪಿಯಾಗಿ ಅವರು ಮಹತ್ವದ ಜವಾಬ್ದಾರಿ ನಿಭಾಯಿಸುತ್ತಿದ್ದರು. ಮೃತರು ಪತಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ.
ಆರೋಗ್ಯ ವಿಚಾರಿಸಿದ್ದ ಡಿಜಿ ಮತ್ತು ಐಜಿಪಿ:
ಲಾವಣ್ಯ ಅವರ ಅನಾರೋಗ್ಯದ ವಿಷಯ ತಿಳಿದು ಎರಡು ತಿಂಗಳ ಹಿಂದೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು (DG & IGP) ಎಂ.ಎ. ಸಲೀಂ ಅವರು ಲಾವಣ್ಯ ಅವರ ವಿದ್ಯಾರಣ್ಯಪುರದ ನಿವಾಸಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಲಾವಣ್ಯ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದು, ಧೈರ್ಯ ತುಂಬಿದ್ದರು. ಆದರೆ ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಮೃತಪಟ್ಟಿದ್ದಾರೆ.
ಗ್ರಾಮದಲ್ಲಿ ನೀರವ ಮೌನ:
ಮೃತರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಾದ ದೊಡ್ಡಗಂಜೂರಿಗೆ ರವಾನಿಸುವ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಯೇ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ. ಯುವ ಅಧಿಕಾರಿಯ ಅಕಾಲಿಕ ನಿಧನಕ್ಕೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ದಕ್ಷ ಅಧಿಕಾರಿಯ ಅಗಲಿಕೆಯಿಂದ ಪೊಲೀಸ್ ಇಲಾಖೆಗೆ ಮತ್ತು ಅವರ ಕುಟುಂಬಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
BREAKING: ಒಳ ಮೀಸಲಾತಿ ಎಫೆಕ್ಟ್: ರಾಜ್ಯದ ಕೃಷಿ ಇಲಾಖೆಯ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ದಿಢೀರ್ ತಡೆ
BREAKING: ಮಹಿಳಾ ಟಿ20 ವಿಶ್ವಕಪ್‌ಗೆ ಭಾರತ ತಂಡ ಬಲಿಷ್ಠ ತಂಡ ಪ್ರಕಟಿಸಿದ ಬಿಸಿಸಿಐ | Women’s T20 World Cup








