ಬೆಂಗಳೂರು : ಜಮೀನಿನಲ್ಲಿರುವ ವಿದ್ಯುತ್ ಕಂಬ ಅಥವಾ ಟ್ರಾನ್ಸ್‌ಫಾರ್ಮರ್‌ಗೆ ಸರ್ಕಾರದಿಂದ ರೈತರಿಗೆ ಪರಿಹಾರ ನೀಡಲಾಗುತ್ತದೆ ಎಂಬ ಸುಳ್ಳು ಮಾಹಿತಿ ಇರುವ ವೀಡೀಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟವರ ವಿರುದ್ಧ ಬೆಸ್ಕಾಂ ದೂರು ಸಲ್ಲಿಸಿದೆ.
ರೈತರು ತಮ್ಮ ಜಮೀನಿನಲ್ಲಿ ವಿದ್ಯುತ್ ಕಂಬ ಅಥವಾ ಟ್ರಾನ್ಸ್‌ಫಾರ್ಮರ್ ಅಳವಡಿಸಿಕೊಂಡಿದ್ದರೆ ಸರ್ಕಾರ ದಿನಕ್ಕೆ 50 ರೂ. ಪರಿಹಾರ ನೀಡಲಿದೆ. ಗೃಹಬಳಕೆದಾರರು ಪ್ರತಿನಿತ್ಯ 2000 ರಿಂದ 5000 ಯೂನಿಟ್ ವಿದ್ಯುತ್ ಬಳಸಿಕೊಳ್ಳಬಹುದು. ಅದಕ್ಕೆ ಸರ್ಕಾರ 5000 ರೂ. ಪರಿಹಾರ ಧನ ನೀಡಲಿದೆ ಎಂಬ ಸಂದೇಶ ನೀಡುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದುದು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಶೋಭಾ ಪ್ರಭಾಕರ್ ಎಂಬುವವರು ‘ಶೋಭಾ ಪ್ರೈಮ್ ಟ್ಯೂಬ್ @ ಪ್ರೈಮ್ ಟ್ಯೂಬ್-ಶೋಭಾ’ ಎಂಬ ಚಾನಲ್‌ನಲ್ಲಿ, ಇಂಧನ ಇಲಾಖೆಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿಗಳನ್ನೊಳಗೊಂಡ 5 ನಿಮಿಷ ಅವಧಿಯ ಒಂದು ವಿಡಿಯೋ ತುಣುಕನ್ನು ಹರಿಬಿಟ್ಟಿದ್ದಾರೆ. ಇದರ ವಿರುದ್ಧ ವಿಧಾನಸೌಧ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.
ವೀಡಿಯೋದಲ್ಲಿರುವ ಸುಳ್ಳು ಮಾಹಿತಿ:
ಕೃಷಿಕರ ಜಮೀನಿನಲ್ಲಿ ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್‌ಫಾರ್ಮರ್ ಇದ್ದರೆ ಅವರಿಗೆ ಸರ್ಕಾರ ಪ್ರತಿ ವಾರ 100 ರೂ.ಗಳ ಪರಿಹಾರ ನೀಡಲಿದೆ. ಅಂತಹ ರೈತರಿಗೆ ತಿಂಗಳಿಗೆ 2000 ರಿಂದ 5000 ಯೂನಿಟ್‌ವರೆಗೆ ಮನೆ ಬಳಕೆ ಹಾಗೂ ನೀರಾವರಿ ವಿದ್ಯುತ್ ಉಚಿತವಾಗಿ ನೀಡಲಾಗುವುದು. ರೈತರ ಹೊಲಗಳಲ್ಲಿರುವ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ಸಂಬಂಧಿಸಿದ ಸಮಸ್ಯೆಗಳು ಕಂಡುಬಂದಲ್ಲಿ 44 ಗಂಟೆಗಳೊಳಗೆ ಪರಿಹರಿಸದಿದ್ದರೆ ಅಂತಹ ರೈತರಿಗೆ ದಿನಕ್ಕೆ 50 ರೂ. ಪರಿಹಾರ ನೀಡಲಾಗುವುದು.
ಮುಂದುವರೆದು, ರೈತರು ತಮ್ಮ ಹೊಲಗಳಲ್ಲಿ ವಿದ್ಯುತ್ ಕಂಬಗಳ ಅಳವಡಿಕೆ ಸಂಬಂಧ ಇಂಧನ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ನಿರಾಕ್ಷೇಪಣಾ ಪತ್ರ ನೀಡಿದರೆ ಅವರಿಗೆ 5000 ರೂ. ಪರಿಹಾರ ಹಣ ನೀಡಲಾವುದು. ಇಂತಹ ರೈತರು ಹೊಸ ವಿದ್ಯುತ್ ಸಂಪರ್ಕ ಪಡೆಯಬಯಸಿದರೆ ಅವರಿಗೆ ರಿಯಾಯಿತಿ ದರದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಇಂತಹ ಯೋಜನೆ ಸದುಪಯೋಗ ಪಡೆಯಲು ಇಚ್ಚಿಸುವ ರೈತರು ಹತ್ತಿರದ ಎಲೆಕ್ಟ್ರಿಸಿಟಿ ಕಚೇರಿಗೆ ಹೋಗಿ ಎನ್.ಓ.ಸಿ ಪಡೆದುಕೊಳ್ಳಬಹುದು ಹಾಗೂ ಹೆಚ್ಚಿನ ವಿವರಗಳಿಗಾಗಿ ಕೆ.ಪಿ.ಟಿ.ಸಿ.ಎಲ್. ವೆಬ್‌ಸೈಟ್‌ಗೆ ಹೋಗಿ ಮಾಹಿತಿ ಪಡೆದುಕೊಳ್ಳಬಹುದು ಎಂದು ವೀಡಿಯೋದಲ್ಲಿ ಹೇಳಲಾಗಿತ್ತು.
ಬೆಸ್ಕಾಂ ಸ್ಪಷ್ಟನೆ
ಯೂಟ್ಯೂಬ್ ಹಾಗೂ ಕೆಲ ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತು ಸುದ್ದಿ ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾಗಿದೆ. ವೀಡಿಯೋದಲ್ಲಿನ ಎಲ್ಲಾ ಹೇಳಿಕೆಗಳು ಸಂಪೂರ್ಣ ಸುಳ್ಳು ಮಾಹಿತಿಯಿಂದ ಕೂಡಿದ್ದು, ರೈತರನ್ನು ತಪ್ಪು ದಾರಿಗೆ ಎಳೆಯುವ ದುರುದ್ದೇಶ ಹೊಂದಿದೆ. ಈ ರೀತಿಯ ತಪ್ಪು ಮಾಹಿತಿಯನ್ನು ಹರಿಬಿಟ್ಟಿರುವ ಮಹಿಳೆ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ವಿಧಾನಸೌಧ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
BREAKING: ‘ಶಿವಮೊಗ್ಗ DCC ಬ್ಯಾಂಕ್’ ನಿರ್ದೇಶಕರ ಚುನಾವಣೆಗೆ ‘ಶಾಸಕ ಬೇಳೂರು ಗೋಪಾಲಕೃಷ್ಣ’ ನಾಮಪತ್ರ ಸಲ್ಲಿಕೆ