ಬೆಂಗಳೂರು: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅಂತಿಮ ಮತದಾರರ ಪಟ್ಟಿಯಲ್ಲಿ 1,02,64,714 ಮತದಾರರಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ಅವರು ತಿಳಿಸಿದರು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2025ರ ಅಂತಿಮ ಮತದಾರರ ಪಟ್ಟಿಯನ್ನು ಇಂದು ಪಾಲಿಕೆ ಕೇಂದ್ರ ಕಛೇರಿ ಸಭಾಂಗಣ-01ರಲ್ಲಿ ಪ್ರಕಟಿಸಿದ ಬಳಿಕ ಮಾತನಾಡಿದ ಅವರು, ಅಂತಿಮ ಮತದಾರರ ಪಟ್ಟಿಯಲ್ಲಿ 1,02,64,714 ಮತದಾರರಿದ್ದು, ಈ ಪೈಕಿ 52,80,287 ಪುರುಷರು, 49,82,589 ಮಹಿಳೆಯರು ಹಾಗೂ 1,838 ಇತರೆ(ತೃತೀಯ ಲಿಂಗಿಗಳು) ಮತದಾರರಿದ್ದಾರೆ ಎಂದು ಹೇಳಿದರು.
ಮತದಾರರ ಅಂತಿಮ ಪ್ರತಿಯನ್ನು ನಗರದ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳ ಮತದಾರರ ನೊಂದಣಾಧಿಕಾರಿಗಳ ಕಛೇರಿ, ಸಹಾಯಕ ಮತದಾರರ ನೊಂದಣಾಧಿಕಾರಿಗಳ ಕಛೇರಿ ಹಾಗೂ ವಾರ್ಡ್ ಕಛೇರಿಗಳಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರಿಗೆ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಅಂತಿಮ ಮತದಾರರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ ಅವರ ವೆಬ್‌ಸೈಟ್ www.ceokarnataka.kar.nic.inಮತ್ತು ಬಿಬಿಎಂಪಿ ವೆಬ್‌ಸೈಟ್ www.bbmp.gov.in ನಲ್ಲಿ ಪರಿಶೀಲಿಸುವ ಮೂಲಕ ಖಾತರಿಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು/ಮತದಾರರು ತಮ್ಮ ಮೊಬೈಲ್‌ನಲ್ಲಿ ವಿ.ಹೆಚ್.ಎ(Voter Helpline App) ಅಥವಾ ವೆಬ್ ಪೋರ್ಟಲ್ ಆದ Voters.eci.gov.in ನಲ್ಲಿ ಖುದ್ದಾಗಿ ಮತದಾರರ ಮಾಹಿತಿಯನ್ನು ಖಾತರಿಪಡಿಸಿಕೊಳ್ಳಬಹುದು. ಜೊತೆಗೆ e-EPIC ಡೌನ್ಲೋಡ್ ಮಾಡಿಕೊಳ್ಳಬಹುದು ಹಾಗೂ ಇನ್ನಿತರೆ ಮಾಹಿತಿಗಳಾದ ಮತಗಟ್ಟೆ, ಶೇಖಡವಾರು ಮತದಾನದ ಮಾಹಿತಿಯನ್ನು ಕೂಡಾ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
95,391 ಯುವ ಮತದಾರರು:
ನಗರದಲ್ಲಿ 1.02 ಕೋಟಿ ಮತದಾರರ ಪೈಕಿ 95,391 ಮತದಾರರು ಯುವ ಮತದಾರರಿದ್ದಾರೆ. 2294 ಅನಿವಾಸಿ ಭಾರತೀಯ ಮತದಾರರು, 1712 ಸೇವಾ ಮತದಾರರು ಹಾಗೂ 32,505 ವಿಶೇಷ ಚೇತನ ಮತದಾರರಿದ್ದಾರೆ.
ಆನ್ ಲೈನ್ ಮೂಖಾಂತರ ಪರಿಶೀಲಿಸಿ:
ಸಾರ್ವಜನಿಕರು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2025ರ ಕಾರ್ಯ ಚಟುವಟಿಕೆಗಳ ಉಪಯೋಗವನ್ನು ಪಡೆದುಕೊಂಡು ಯಾವುದೇ ಕಛೇರಿಗೆ ಹೋಗದೆ ಅವರಿರುವ ಸ್ಥಳದಿಂದಲೇ Web Portal-Voters.eci.gov.in ಅಥವಾ Voter Helpline Mobile App ಮೂಲಕ ತಮ್ಮ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಬಹುದು. ಅವಶ್ಯವಿದ್ದಲ್ಲಿ ನಮೂನೆ 6, 7 ಮತ್ತು 8 ಇತ್ಯಾದಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ರಾಜಕೀಯ ಪ್ರತಿನಿಧಿಗಳ ಜೊತೆ ಸಭೆ:
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2025ರ ಅಂತಿಮ ಮತದಾರರ ಪಟ್ಟಿ ಪ್ರಕಟಕ್ಕೆ ಸಂಬಂಧಿಸಿದಂತೆ ಮತದಾರರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ವಿಚಾರದ ಬಗ್ಗೆ ಮಾಹಿತಿ ನೀಡಲಾಗಿದೆ. ಎಷ್ಟು ಹೆಚ್ಚಳ ಆಗಿದೆ, ಎಷ್ಟು ಬದಲಾಗಿದೆ.
ಈ ವೇಳೆ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಸೆಲ್ವಮಣಿ, ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ವಿನೋತ್ ಪ್ರಿಯಾ, ಅವಿನಾಶ್ ಮೆನನ್ ರಾಜೇಂದ್ರನ್, ಸ್ನೇಹಲ್, ಜಗದೀಶ್, ಚುನಾವಣಾ ವಿಭಾಗದ ಸಹಾಯಕ ಆಯುಕ್ತರಾದ ಶರಣಪ್ಪ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಸಚಿವ ರಾಮಲಿಂಗಾರೆಡ್ಡಿ ಮಹತ್ವದ ನಿರ್ಧಾರದ ಎಫೆಕ್ಟ್: ದೇಗುಲಗಳಿಗೆ 11,499 ಎಕರೆ ಸೇರ್ಪಡೆ
ಕೊಪ್ಪಳ ಜಿಲ್ಲೆಯ ಸಂತ್ರಸ್ತೆ ಮನೆಗೆ ಬಿಜೆಪಿ ಸತ್ಯಶೋಧನಾ ಸಮಿತಿ ಭೇಟಿ: ಕಳಪೆ ಔಷಧಿ ಸರಬರಾಜಿಗೆ ಆಕ್ಷೇಪ