ಬೆಂಗಳೂರು : ಯುವತಿಯನ್ನು ಅಪಹರಿಸುವ ಯತ್ನದಲ್ಲಿ ಕಿಡಿಗೇಡಿಗಳಿಂದ ಚಾಕು ಇರಿತಕ್ಕೊಳಗಾಗಿದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದ ಮಾಗೇಶ್ವರಿ (55) ಚಿಕಿತ್ಸೆ ಫಲಿಸದೇ ತಡರಾತ್ರಿ ಸಾವನ್ನಪ್ಪಿದ್ದಾರೆ.
ಮಾರ್ಚ್ 25ರಂದು ಆಡುಗೋಡಿಯ ಮನೆಯಲ್ಲಿ ಮಾಗೇಶ್ವರಿ ಅವರಿಗೆ ಚಾಕು ಇರಿಯಲಾಗಿತ್ತು. ಮಾಗೇಶ್ವರಿಯ ಸಹೋದರ ಸಂಬಂಧಿ ಕಿರಣ್ ಮತ್ತು ಅವರ ಕಡೆಯವರು ಚಾಕುವಿನಿಂದ ಹಲ್ಲೆಗೈದು ಪರಾರಿಯಾಗಿದ್ದರು. ಮಾಗೇಶ್ವರಿಯ ಮೊಮ್ಮಗಳನ್ನು ಅಪಹರಿಸುವ ಯತ್ನದಲ್ಲಿ ಈ ಘಟನೆ ನಡೆದಿತ್ತು.
ಮಾಗೇಶ್ವರಿಯ ಅಣ್ಣನ ಮಗನಾಗಿದ್ದ ಕಿರಣ್ಗೆ ಮದುವೆಯಾಗಿದ್ದರೂ ಸಹ ಆಕೆಯ ಮೊಮ್ಮಗಳ ಜೊತೆಗೆ ವಾಸಿಸುತ್ತಿದ್ದ. ಕೆಲ ದಿನಗಳ ಹಿಂದೆ ಕಿರಣ್ನನ್ನು ತೊರೆದು ಬಂದು ಅಜ್ಜಿ ಮಾಗೇಶ್ವರಿಯೊಂದಿಗೆ ಆಡುಗೋಡಿಯಲ್ಲಿ ವಾಸವಿದ್ದಳು. ಆದರೆ ಮಾರ್ಚ್ 25ರಂದು ಯುವತಿಯನ್ನು ಹುಡುಕಿಕೊಂಡು ಬಂದಿದ್ದ ಕಿರಣ್ ಮತ್ತವನ ಕಡೆಯವರು, ಬಲವಂತವಾಗಿ ಆಕೆಯನ್ನು ಅಪಹರಿಸಿಕೊಂಡು ಹೋಗಲು ಯತ್ನಿಸಿದ್ದರು.
ಆ ಸಂದರ್ಭದಲ್ಲಿ ತಡೆಯಲು ಬಂದ ಮಾಗೇಶ್ವರಿಗೆ ಚಾಕುವಿನಿಂದ ಹಲ್ಲೆ ಮಾಡಿ, ಇರಿದು ಪರಾರಿಯಾಗಿದ್ದರು. ಈ ಸಂಬಂಧ ಹತ್ಯೆ ಯತ್ನ ಪ್ರಕರಣ ದಾಖಲಾಗಿದೆ. ಈಗಾಗಲೇ ಕಿರಣ್, ಮಣಿವಣ್ಣನ್, ಮಣಿರಾಜ್ ಹಾಗೂ ಅಭಿಷೇಕ್ ಎಂಬ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ಈಗ ಪ್ರಕರಣವನ್ನು ಹತ್ಯೆ ಪ್ರಕರಣವನ್ನಾಗಿ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ








