ಬೆಂಗಳೂರು : ಅವರಿಬ್ಬರದು ಎರಡು ವರ್ಷದ ಪ್ರೀತಿ ಆದರೆ ಇತ್ತೀಚೆಗೆ ಕ್ಷುಲ್ಲಕ ಕಾರಣಗಳಿಂದಾಗಿ ಆಗಾಗ ಇಬ್ಬರ ನಡುವೆ ಮನಸ್ತಾಪ ಉಂಟಾಗುತ್ತಿತ್ತು. ಇದರಿಂದ ಇಬ್ಬರು ದೂರವಾಗಿದ್ದರು. ಆದ್ರೆ ಬ್ರೇಕ್ ಅಪ್ ನಿಂದಾಗಿ ಮನನೊಂದ ಯುವತಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಸೋಲದೇವನಹಳ್ಳಿ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.
ಹೌದು ಡಾರ್ಜಿಲಿಂಗ್ ಮೂಲದ ಲಿಖಿತ ಜಾಸ್ಮೀನ್(24) ಮೃತ ದುರ್ದೈವಿ. 10 ದಿನಗಳ ಹಿಂದೆ ತನ್ನ ಅಕ್ಕ ಕೃತಿಕ ಜಾಸ್ಮೀನ್ ಮನೆಗೆ ಬಂದಿದ್ದ ಯುವತಿ ಇಂದು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಲಿಖಿತ ಜಾಸ್ಮೀನ್ ಬಿಹಾರಿ ಮೂಲದ ಯುವಕನನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದಳು. ಇಬ್ಬರ ಪ್ರೇಮ ಚನ್ನಾಗಿಯೇ ಇತ್ತು. ಆದರೆ ಇತ್ತೀಚೆಗೆ ಕ್ಷುಲ್ಲಕ ಕಾರಣಗಳಿಗಾಗಿ ಲವ್ ಬ್ರೇಕ್ ಅಪ್ ಆಗಿತ್ತು. ಇದರಿಂದ ಲಿಖಿತ ಜಾಸ್ಮೀನ್ ಮನನೊಂದಿದ್ದಳು.
ತಂಗಿ ಒಬ್ಬಳೇ ಇದ್ದರೆ ಏನಾದ್ರು ಮಾಡಿಕೊಳ್ಳುತ್ತಾಳೆಂದು ಭಯಪಟ್ಟು ಲಿಖಿತ ಅಕ್ಕ ಕೃತಿಕ ತಂಗಿಯ ನೋವು ಮರೆಸುವ ಸಲುವಾಗಿ ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿದ್ದ ತನ್ನ ಮನೆಗೆ ಕರೆದುಕೊಂಡು ಬಂದು ಇರಿಸಿಕೊಂಡಿದ್ದರು. ಆದರೆ ಇಂದು ಬೆಳಿಗ್ಗೆ 9ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಮನೆಯಿಂದ ಆಚೆ ಬಂದ ಲಿಖಿತ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರೈಲ್ವೆ ಪೊಲೀಸರು ಸ್ಥಳ ಮಹಜರು ಕಾರ್ಯ ನಡೆಸಿದ್ದು ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.