ಬೆಂಗಳೂರು : ಬೆಂಗಳೂರಿನಲ್ಲಿ ಪದೇ ಪದೇ ಪ್ರಮುಖ ರಸ್ತೆಗಳಲ್ಲಿ ಗುಂಡಿ ಬಿದ್ದು, ಅಪಘಾತಕ್ಕೆ ಎಡೆ ಮಾಡಿಕೊಡುತ್ತಿದ್ದರಿಂದ ಶೀಘ್ರದಲ್ಲಿ ಶಾಶ್ವತ ರಸ್ತೆಗಳನ್ನು ನಿರ್ಮಿಸಲು 1800 ಕೋಟಿ ವೆಚ್ಚದಲ್ಲಿ 157 ಕಿ.ಮೀ ವೈಟ್ ಟಾಪಿಂಗ್ ರಸ್ತೆ ನಿರ್ಮಿಸಲಿದ್ದೇವೆ ಎಂದು ಡಿಸಿಎಂ ಡಿ. ಕೆ ಶಿವಕುಮಾರ್ ತಿಳಿಸಿದ್ದಾರೆ.
ಬ್ರ್ಯಾಂಡ್ ಬೆಂಗಳೂರು, ಸುಗಮ ಸಂಚಾರ ಬೆಂಗಳೂರು ಪರಿಕಲ್ಪನೆಯಡಿ ಚಾಮರಾಜಪೇಟೆ, ಗಾಂಧಿನಗರ, ಮಲ್ಲೇಶ್ವರ, ಮಹಾಲಕ್ಷ್ಮೀಪುರಗಳಲ್ಲಿ 200 ಕೋಟಿ ವೆಚ್ಚದಲ್ಲಿ 19.67 ಕಿ.ಮೀ ವೈಟ್ ಟಾಪಿಂಗ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಿತ್ಯ ಮೂರ್ನಾಲ್ಕು ವಾರ್ಡ್ಗಳಲ್ಲಿ ಈ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುವುದು. ಕಾಲಮಿತಿಯಲ್ಲಿ ಈ ಕಾಮಗಾರಿ ಪೂರ್ಣಗೊಳಿಸಲಾಗುವುದು. ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಲು 200 ಕಿ.ಮೀ ನಷ್ಟು ಹೊಸ ರಸ್ತೆ ನಿರ್ಮಾಣ ಮಾಡಲು ತೀರ್ಮಾನ ಮಾಡಿದ್ದು, ಉನ್ನತ ಗುಣಮಟ್ಟಕ್ಕಾಗಿ ವೈಟ್ ಟಾಪಿಂಗ್ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಗುಂಡಿಗಳು ಬೀಳಬಾರದು ಎಂಬ ಉದ್ದೇಶದಿಂದ ವೈಟ್ ಟಾಪಿಂಗ್ ರಸ್ತೆ ಮಾಡಲಾಗುತ್ತಿದೆ. ಈ ರಸ್ತೆಗಳು ಸುಮಾರು 25 ವರ್ಷಗಳ ಕಾಲ ಬಾಳಿಕೆ ಬರುತ್ತವೆ ಎಂದರು.