ಬೆಂಗಳೂರು : ನಗರದಲ್ಲಿ ಖಾಸಗಿ ಡಿಟೆಕ್ಟಿವ್ ಏಜೆನ್ಸಿಗಳ ಹೆಸರಿನಲ್ಲಿ ಅಕ್ರಮವಾಗಿ ಸಾರ್ವಜನಿಕರಿಂದ ಮೊಬೈಲ್ ಸಿಡಿಆರ್ (Call Detail Record) ರಹಸ್ಯವಾಗಿ ಆಲಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸ್ ಸಿಬ್ಬಂದಿ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿಐಡಿ ಪೊಲೀಸ್ ಸಿಬ್ಬಂದಿ ಮುನಿರತ್ನ ಹಾಗೂ ಪ್ರಕರಣದ ಕಿಂಗ್ ಪಿನ್ ನಾಗೇಶ್ವರ ರೆಡ್ಡಿ ಬಂಧಿತರು ಎಂದು ತಿಳಿದುಬಂದಿದೆ.
ಹೌದು ಮೇ ತಿಂಗಳಲ್ಲಿ ಮಹಾನಗರಿ ಡಿಟೆಕ್ಟಿವ್ ಹಾಗೂ ಸೆಕ್ಯೂರಿಟಿ ಸೆಲ್ಯೂಷನ್ ಪ್ರೈವೇಟ್ ಲಿಮಿಟೆಡ್, ರಾಜಧಾನಿ ಕಾರ್ಪೊರೇಟ್ ಸರ್ವಿಸ್ ಎಂಬ ಹೆಸರಿನ ಕಚೇರಿಗಳಲ್ಲಿ ಪರಿಶೀಲನೆ ನಡೆಸಿ ಅನಧಿಕೃತವಾಗಿ ಸಿಡಿಆರ್ ಪಡೆಯುತ್ತಿದ್ದ ಆರೋಪದಡಿ ಮೂರು ಪ್ರಕರಣಗಳನ್ನು ದಾಖಲಿಸಿ ಆರೋಪಿಗಳಾದ ಪುರುಷೋತ್ತಮ, ಸತೀಶ್ ಕುಮಾರ್, ತಿಪ್ಪೇಸ್ವಾಮಿ, ಮಹಾಂತಗೌಡ, ರೇವಂತ, ಗುರುಪಾದಸ್ವಾಮಿ, ಶ್ರೀನಿವಾಸ ಮತ್ತು ಭರತ್ ಎಂಬವರನ್ನು ಬಂಧಿಸಲಾಗಿತ್ತು.
ಮುನಿರತ್ನ ಹಲವು ವರ್ಷಗಳಿಂದ ಸಿಐಡಿ ಟೆಕ್ನಿಕಲ್ ಸೆಲ್ನಲ್ಲಿ ಕೆಲಸ ಮಾಡಿಕೊಂಡಿದ್ದ. ಹಿರಿಯ ಅಧಿಕಾರಿಗಳು ಕೇಸ್ ಸಂಬಂಧ ಅಧಿಕೃತವಾಗಿ ಸಿಡಿಆರ್ ಪಡೆಯಲು ಸರ್ವಿಸ್ ಪ್ರೊವೈಡರ್ಗಳಿಗೆ ನೀಡುವ ಪತ್ರದಲ್ಲಿ ತನಗೆ ಬೇಕಾದ ಫೋನ್ ನಂಬರ್ಗಳನ್ನು ಸೇರಿಸಿ ಸಿಡಿಆರ್ ಪಡೆಯುತ್ತಿದ್ದ. ಸಿಡಿಆರ್ ಬಂದ ನಂತರ ಅಧಿಕೃತವಾದ ಸಿಡಿಆರ್ಗಳನ್ನು ಅಧಿಕಾರಿಗಳಿಗೆ ನೀಡಿ ಅನಧಿಕೃತ ಸಿಡಿಆರ್ಗಳನ್ನು ನಾಗೇಶ್ವರ ರೆಡ್ಡಿಗೆ ನೀಡುತ್ತಿದ್ದ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಇನ್ನು ಗಂಡ ಹೆಂಡತಿ, ಪ್ರೇಮಿಗಳ ನಡುವಿನ ಅನುಮಾನಕ್ಕೆ ಸಿಡಿಆರ್ ಗಳು ಹೆಚ್ಚು ಬಳಕೆಯಾಗಿರೊ ಸಾಧ್ಯತೆಯಿದೆ. ಸಿಡಿಆರ್ ಪಡೆಯುತ್ತಿದ್ದವರು ಯಾರು ಅಂತ ನೋಡೊದಾದ್ರೆ ಹೆಚ್ಚಾಗಿ ಗಂಡ ಅಥವಾ ಹೆಂಡತಿ ಮತ್ತು ಪ್ರೇಮಿಗಳು ಸಂಬಂಧದಲ್ಲಿ ಅನುಮಾನ ಮೂಡಿ ತಮ್ಮ ಪ್ರೀತಿ ಪಾತ್ರರ ಯಾರು ಸಂಪರ್ಕದಲ್ಲಿದ್ದಾರೆ ಅನ್ನೋದನ್ನ ತಿಳಿದುಕೊಳ್ಳಲು ಈ ಕಾಲ್ ಡಿಟೈಲ್ಸ್‌ನ ಅನಧಿಕೃತವಾಗಿ ಪಡೆದುಕೊಳ್ಳುತ್ತಿದ್ದರಂತೆ.
ಅಷ್ಟೇ ಅಲ್ಲದೇ ಬ್ಯುಸಿನೆಸ್ ಮೆನ್‌ಗಳು ಕೆಲ ರಾಜಕೀಯ ವ್ಯಕ್ತಿಗಳು ತಮ್ಮ ಎದುರಾಳಿಗಳ ಸಿಡಿಆರ್ ಪಡೆದಿರೋ ಶಂಕೆ ವ್ಯಕ್ತವಾಗಿದೆ. ಇದ್ರಲ್ಲಿ ಕೆಲ ಪೊಲೀಸ್ ಅಧಿಕಾರಿಗಳ ಪತ್ನಿಯರು ತಮ್ಮ ಪತಿಯ ಕಾಲ್ ಡಿಟೈಲ್ ಪಡೆದಿದ್ದಾರಂತೆ. ಸದ್ಯ ನಾಗೇಶ್ವರ ರೆಡ್ಡಿ ಮತ್ತು ಪೊಲೀಸ್ ಸಿಬ್ಬಂದಿ ಮುನಿರತ್ನ ಬಂಧಿಸಿರೋ ಸಿಸಿಬಿ ಹೆಚ್ಚಿನ ವಿಚಾರಣೆಗೆ ಒಳಪಡಿಸ್ತಿದೆ.