ಬೆಂಗಳೂರು : ಕಳೆದ ನಾಲ್ಕು ದಿನಗಳ ಹಿಂದೆ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಲ್ಲಿ ಪ್ರಿಯಕರನ ಜೊತೆ ಸೇರಿ ಪತಿಯ ತಲೆ ಮೇಲೆ ರುಬ್ಬುವ ಗುಂಡು ಕಲ್ಲನ್ನು ಎತ್ತಿ ಹಾಕಿ ಕೊಲೆ ಮಾಡಿರುವ ಪ್ರೇಮಿಗಳಿಬ್ಬರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ನಂದಿನಿಬಾಯಿ ಮತ್ತು ನಿತೀಶ್ ಕುಮಾರ್ ಬಂಧಿತ ಆರೋಪಿಗಳು. ವೆಂಕಟ್ ನಾಯಕ್(30) ಕೊಲೆಯಾದ ವ್ಯಕ್ತಿ (Murder). ಇದೇ ತಿಂಗಳ 09ರಂದು ಹೆಚ್ಎಸ್ಆರ್ ಲೇಔಟ್ನ ಮನೆಯಲ್ಲಿ ಆರೋಪಿ ನಂದಿನಿಬಾಯಿ ತನ್ನ ಪ್ರಿಯಕರ ನಿತೀಶ್ ಕುಮಾರ್ ಜೊತೆ ಸೇರಿ ತನ್ನ ಪತಿ ವೆಂಕಟ್ ನಾಯಕ್ ತಲೆ ಮೇಲೆ ರುಬ್ಬುವ ಗುಂಡು ಹಾಕಿ ಕೊಲೆ ಮಾಡಿದ್ದರು. ಸದ್ಯ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.
ಗಂಡ ಮನೆಯಲ್ಲಿ ಇಲ್ಲ ಎಂದು ಹೇಳಿ ನಂದಿನಿ ಬಾಯಿ ಜನವರಿ 09 ರಂದು ಪ್ರಿಯಕರ ನಿತೇಶ್ನನ್ನು ಹೆಚ್ಎಸ್ಆರ್ ಲೇಔಟ್ನ ತನ್ನ ಮನೆಗೆ ಕರೆಸಿಕೊಂಡಿದ್ದಳು. ಈ ವೇಳೆ ಗಂಡ ವೆಂಕಟನಾಯಕ್ ಧಿಡೀರ್ ಮನೆಗೆ ಬಂದಿದ್ದ. ಮನೆಗೆ ಕಾಲಿಡುತ್ತಿದ್ದಂತೆ ರೂಮ್ನಲ್ಲಿ ತನ್ನ ಪತ್ನಿ ಬೇರೊಬ್ಬನ ಜೊತೆ ಆತ್ಮೀಯ ಸಲುಗೆಯಲ್ಲಿದ್ದದನ್ನು ಕಂಡು ಕೋಪಗೊಂಡಿದ್ದ. ಬಳಿಕ ಪತಿ-ಪತ್ನಿ ನಡುವೆ ಗಲಾಟೆಯಾಗಿದ್ದು ಜಗಳ ತಾರಕ್ಕಕ್ಕೇರಿ ಕೊಲೆ ನಡೆದಿದೆ. ನಂದಿನಿ ಹಾಗೂ ಆಕೆಯ ಪ್ರಿಯಕರ ಇಬ್ಬರು ಸೇರಿ ವೆಂಕಟನಾಯಕ್ನ ತಲೆ ಮೇಲೆ ರುಬ್ಬುವ ಗುಂಡು ಎತ್ತಾಕಿ ಕೊಲೆ ಮಾಡಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಿದಾಗ ಕೊಲೆ ಎಂಬುದು ಬಯಲಾಗಿದೆ. ಪೊಲೀಸರಿಗೂ ಸ್ಥಳ ಪರಿಶೀಲನೆ ವೇಳೆ ಕೊಲೆ ಎಂಬುದಾಗಿ ಅನುಮಾನ ಬಂದಿತ್ತು. ಪೊಲೀಸರಿಗೆ ನಂದಿನಿ ಮೇಲೆ ಅನುಮಾನ ವ್ಯಕ್ತವಾಗಿ ನಿಗಾ ಇಟ್ಟಿದ್ರು. ಮರಣೋತ್ತರ ವರದಿ ಬಂದ ಬಳಿಕ ನಂದಿನಿಯನ್ನ ವಿಚಾರಿಸಿದಾಗ ನನ್ನ ಗಂಡನನ್ನು ಕಳೆದಕೊಂಡಿದ್ದೀನಿ ಅಂತ ನಾಟಕವಾಡಿದ್ದಳು. ಪೊಲೀಸರು ತಮ್ಮ ಸ್ಟೈಲ್ ನಲ್ಲಿ ವಿಚಾರಣೆ ನಡೆಸಿದಾಗ ಪ್ರಿಯಕರ ನಿತೀಶ್ ಕುಮಾರ್ ಜೊತೆ ಸೇರಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.