ಬೆಂಗಳೂರು: ಖಾಸಗಿ ಫೋಟೋ ಇರುವುದಾಗಿ ಎಂದು ಹೇಳಿ ಸಾಫ್ಟ್ ವೇರ್ ಇಂಜಿನಿಯರ್‌ಗೆ ಬೆದರಿಸಿ ಪರಿಚಯಸ್ಥರೇ ಸುಮಾರು 65 ಲಕ್ಷ ರೂ. ಸುಲಿಗೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.ವಂಚನೆಗೆ ಒಳಗದವನನ್ನು ಶಿವಮೊಗ್ಗ ಜಿಲ್ಲೆ ಸೊರಬ ಮೂಲದ 26 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಎಂದು ಹೇಳಲಾಗುತ್ತಿದೆ.
ಈತ ಕೊಟ್ಟ ದೂರಿನ ಮೇರೆಗೆ ಬಿಟಿಎಂ ಲೇಔಟ್ ನಿವಾಸಿಗಳಾದ ಅಕ್ಷಯ್‌ಕುಮಾರ್ ಮತ್ತು ಭರತ್ ಎಂಬುವರ ವಿರುದ್ಧ ವಿಧಾನಸೌಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದ್ದು, ಅವರ ಪತ್ತೆಗೆ ಇದೀಗ ಪೊಲೀಸರು ಬಲೆ ಬೀಸಿದ್ದಾರೆ.
ಡಾ.ಬಿ.ಆರ್. ಅಂಬೇಡ್ಕರ್ ರಸ್ತೆಯಲ್ಲಿರುವ ಸಾಫ್ಟ್‌ವೇರ್ ಕಂಪನಿ ನೌಕರನಾದ ಟೆಕ್ಕಿಗೆ ಹಲವು ವರ್ಷಗಳಿಂದ ಅಕ್ಷಯ್ ಮತ್ತು ಆತನ ಅಣ್ಣ ಭರತ್ ಪರಿಚಯವಿತ್ತು. ಕಳೆದ ವರ್ಷ ಫೆ.10ರಂದು ನಿನಗೆ ಸೇರಿದ ಖಾಸಗಿ ಫೋಟೋ ಅಪರಿಚಿತ ವ್ಯಕ್ತಿ ಬಳಿ ಇದೆ. ಆತ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡುತ್ತಿದ್ದು ನೀನು 12 ಲಕ್ಷ ರೂ. ಕೊಟ್ಟರೆ ಸುಮ್ಮನಾಗುತ್ತಾನೆ ಎಂದು ಹೇಳಿದ್ದರು. ಭಯಗೊಂಡ ಟೆಕ್ಕಿ, 11.20 ಲಕ್ಷ ರೂ. ಕೊಟ್ಟಿದ್ದ.
ಇದಾದ ಮೇಲೆ ಮಾರ್ಚ್‌ನಲ್ಲಿ ಮತ್ತೆ ಇದೇ ಫೋಟೋ ವಿಚಾರ ಮುಂದಿಟ್ಟುಕೊಂಡ ಆರೋಪಿಗಳು, ಬೇರೆಯವರ ಹೆಸರು ಹೇಳಿಕೊಂಡು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿ ಮತ್ತೆ 12 ಲಕ್ಷ ರೂ. ಸುಲಿಗೆ ಮಾಡಿದ್ದರು.ಅಕ್ಷಯ್ ಕುಮಾರನ ಸಹೋದರಿ ಎಂದು ಹೇಳಿಕೊಂಡು ಟೆಕ್ಕಿಗೆ ಕರೆ ಮಾಡಿ, ತನ್ನ ಸಹೋದರನಿಗೆ ತೊಂದರೆ ಆಗುತ್ತಿದೆ. ಈಗ ಹಣ ಕೊಡದಿದ್ದರೆ ಖಾಸಗಿ ಫೋಟೋವನ್ನು ಜಾಲತಾಣದಲ್ಲಿ ವೈರಲ್ ಮಾಡು ವುದಾಗಿ ಹೇಳಿ 15 ಲಕ್ಷ ರೂ. ವಸೂಲಿ ಮಾಡಿದ್ದರು.
ಇದೇ ರೀತಿಯಾಗಿ ಪ್ರಸಕ್ತ ವರ್ಷ ಜ.31 ರವರೆಗೂ ಹಂತ ಹಂತವಾಗಿ ಸಾಫ್ಟ್ ವೇರ್ ಇಂಜಿನಿಯರ್ ಬಳಿ 65 ಲಕ್ಷ ರೂ. ಸುಲಿಗೆ ಮಾಡಿದ್ದಾರೆ. ನೊಂದ ಟೆಕ್ಕಿ, ಈಗ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.