ಬೆಂಗಳೂರು : ಬೆಂಗಳೂರಿನ ಮಾರತ್ತಹಳ್ಳಿಯಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಮಾರತ್ತಹಳ್ಳಿ ಠಾಣೆ ಪೋಲಿಸರು ಆರೋಪಿ ಶ್ರೀಕಾಂತ್ ಎನ್ನುವವನನ್ನು ಅರೆಸ್ಟ್ ಮಾಡಿದ್ದಾರೆ.
ಬಂಧಿತ ಶ್ರೀಕಾಂತ್ (32) ಎಂಬಿಎ ಪದವೀಧರನಾಗಿದ್ದು ದೇವರಬೀಸನಹಳ್ಳಿ ನಿವಾಸಿ ಎಂದು ತಿಳಿದುಬಂದಿದೆ. ಏಪ್ರಿಲ್ 30ರಂದು ರಾತ್ರಿ 11:30ರ ಸುಮಾರಿಗೆ ಇಕೋ ವರ್ಲ್ಡ್ ಮೇನ್ ಗೇಟ್ ಬಳಿ ಯುವತಿಯನ್ನು ಆರೋಪಿ ಹಿಂದಿನಿಂದ ಸ್ಪರ್ಶಿಸಿದ್ದಾನೆ. ಈ ಕುರಿತು 23 ವರ್ಷದ ಯುವತಿ ನೀಡಿದ್ದ ದೂರಿನನ್ವಯ ಮಾರತ್ ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಹಿನ್ನೆಲೆ?
ಏಪ್ರಿಲ್ 30 ರಂದು ಇಕೋ ವರ್ಲ್ಡ್ ಮೇನ್ ಗೇಟ್ ಬಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಆರೋಪಿ ಹಿಂಭಾಗ ಸ್ಪರ್ಶಿಸಿ ಹೋಗಿದ್ದ. ಕೆಲವೇ ನಿಮಿಷಗಳಲ್ಲಿ ಪುನಃ ಹಿಂದಿನಿಂದ ಬಂದು ಮತ್ತದೇ ರೀತಿಯ ಅನುಚಿತ ವರ್ತನೆ ತೋರಿದ್ದಾನೆ. ಈ ಸಂದರ್ಭದಲ್ಲಿ ಸಮೀಪದಲ್ಲಿದ್ದ ಕೆಲವರ ಸಹಾಯ ಕೇಳಿದರೂ ಯಾರೂ ನೆರವಿಗೆ ಬರಲಿಲ್ಲ ಎಂದು ನೊಂದ ಯುವತಿ ದೂರಿನಲ್ಲಿ ಆರೋಪಿಸಿದ್ದರು.