ಬೆಂಗಳೂರು: ತನ್ನ ಕುಡಿತದ ಚಟಕ್ಕೆ ಹಣ್ಣಕ್ಕಾಗಿ ಪ್ರತಿದಿನ ಹೆಂಡತಿಯ ಜೊತೆಗೆ ಗಲಾಟೆ ಮಾಡುತ್ತಿದ್ದ ಪ್ರತಿಯೊಬ್ಬ ಪತ್ನಿಯ ಕುತ್ತಿಗೆಯನ್ನು ಸೀರೆಯಿಂದ ಬಿಗಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ರಂಗನಾಥಪುರದಲ್ಲಿ ನಡೆದಿದೆ.
ಕುತ್ತಿಗೆಗೆ ಸೀರೆ ಬಿಗಿದ ಸ್ಥಿತಿಯಲ್ಲಿ ನೇತ್ರಾವತಿ (34) ಎಂಬ ಮಹಿಳೆ ಸಾವಿಗೀಡಾಗಿದ್ದಾರೆ. ಪತ್ನಿಯನ್ನು ಹತ್ಯೆಗೈದ ಆರೋಪದಡಿ ಪತಿ ವೆಂಕಟೇಶ ಎಂಬಾತನನ್ನು ಕಾಮಾಕ್ಷಿಪಾಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮಾಗಡಿಯ ಗೇರುಪುರ ಮೂಲದ ದಂಪತಿ ನಾಲ್ಕು ವರ್ಷಗಳಿಂದ ರಂಗನಾಥಪುರದಲ್ಲಿ ವಾಸವಿದ್ದರು. ಇವರಿಗೆ 9 ವರ್ಷದ ಗಂಡು ಮಗನಿದ್ದಾನೆ. ವೆಂಕಟೇಶ್ ಕ್ರೇನ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ನೇತ್ರಾವತಿ ಗಾರ್ಮೆಂಟ್ಸ್ವೊಂದರಲ್ಲಿ ಕೆಲಸ ಮಾಡುತ್ತಿದ್ದನು.
ನಿತ್ಯ ಮದ್ಯಪಾನ ಮಾಡಿ ಮನೆಗೆ ಬಂದು ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದ ವೆಂಕಟೇಶನಿಗೆ ಸಂಬಂಧಿಕರು ಬುದ್ದಿವಾದ ಹೇಳಿದ್ದರು. ಆದರೂ ಸಹ ಖರ್ಚಿಗೆ ಹಣಕ್ಕಾಗಿ ಪತ್ನಿಯ ಬಳಿಯಿದ್ದ ಒಡವೆಗಳನ್ನು ನೀಡುವಂತೆ ಪೀಡಿಸುತ್ತಿದ್ದನು. ಇದೇ ಕಾರಣಕ್ಕಾಗಿ ಎರಡು ದಿನಗಳ ಹಿಂದೆಯೂ ಗಲಾಟೆಯಾಗಿತ್ತು. ಶನಿವಾರ ರಾತ್ರಿ ಕುಡಿದು ಬಂದು ಗಲಾಟೆ ಮಾಡಿದ್ದ ವೆಂಕಟೇಶ್, ಪತ್ನಿ ಉಸಿರುಗಟ್ಟಿಸಿ ಹತ್ಯೆಗೈದು ಬಳಿಕ ತಲೆಮರೆಸಿಕೊಂಡಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಬೆಳಗ್ಗೆ ಪಕ್ಕದ ಮನೆಯವರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಕೃತ್ಯದ ಬಳಿಕ ಬಸ್ ನಿಲ್ದಾಣದ ಬಳಿಯಿದ್ದ ವೆಂಕಟೇಶನನ್ನು ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.