ಬೆಂಗಳೂರು : ಸುಮಾರು 6 ಎಕರೆ ಪ್ರದೇಶದಲ್ಲಿ ಟೊಮ್ಯಾಟೋ ಬೆಳೆ ಬೆಳೆದಿದ್ದ ಟೆಕ್ಕಿ ಒಬ್ಬ, ಟೊಮ್ಯಾಟೋ ಲಾಸ್ ಆಗಿದ್ದಕ್ಕೆ ತಾನು ಈ ಹಿಂದೆ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಸುಮಾರು 22 ಲಕ್ಷ ಮೌಲ್ಯದ ಲ್ಯಾಪ್ಟಾಪ್ ಕಳ್ಳತನ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ತಮಿಳುನಾಡಿನ ಹೊಸೂರಿನ ಮುರುಗೇಶ್ ಎಂಬ ಟೆಕ್ಕಿ ಐಟಿಪಿಲ್ ಬಳಿಯಿರುವ ಕಂಪನಿಯೊಂದರಲ್ಲಿ ಸಿಸ್ಟಂ ಅಡ್ಮಿನ್ ಆಗಿ ಕೆಲಸ ಆರಂಭಿಸಿದ್ದ. ಆಗಸ್ಟ್ 22ರಿಂದ ಕೆಲಸಕ್ಕೆ ಬಾರದೆ ಗೈರಾಗಿದ್ದ. ಅನುಮಾನಗೊಂಡ ಕಂಪನಿಯವರು ಪರಿಶೀಲಿಸಿದಾಗ ಆರೋಪಿ ಕೆಲಸ ನಿರ್ವಹಿಸುತ್ತಿದ್ದಾಗ ಆತನ ಸುಪರ್ದಿಯಲ್ಲಿದ್ದ ಒಟ್ಟು 57 ಲ್ಯಾಪ್‌ಟಾಪ್‌ಗಳು ನಾಪತ್ತೆಯಾಗಿರುವುದು ಕಂಡು ಬಂದಿತ್ತು. ತಕ್ಷಣ ಕಂಪನಿಯ ಪ್ರತಿನಿಧಿ ವೈಟ್‌ಫೀಲ್ಡ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ತಮಿಳುನಾಡಿನ ಹೊಸೂರಿನ ರಾಘವೇಂದ್ರ ಚಿತ್ರಮಂದಿರದ ಬಳಿ ಸಿಸ್ಟಂ ಅಡ್ಮಿನ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಸಾಲ ಮಾಡಿ ಹೊಸೂರಿನಲ್ಲಿರುವ ತನ್ನ 5 ಎಕರೆ ಜಮೀನಿನಲ್ಲಿ ಟೊಮ್ಯಾಟೊ ಬೆಳೆದಿದ್ದ ಆರೋಪಿಗೆ ಉತ್ತಮ ಬೆಲೆ ಸಿಗದೆ ಸಾಕಷ್ಟು ನಷ್ಟವಾಗಿತ್ತು.
ಸಾಲ ತೀರಿಸಲು ಕಳ್ಳತನಕ್ಕಿಳಿದಿದ್ದ ಆರೋಪಿ ಕದ್ದ ಲ್ಯಾಪ್‌ಟಾಪ್‌ಗಳನ್ನು ರಿಪೇರಿ ಮತ್ತು ಮಾರಾಟ ಮಾಡುವ ಅಂಗಡಿಗೆ ಮಾರಾಟ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.ಈತನಿಂದ 22 ಲಕ್ಷ ರೂ. ಮೌಲ್ಯದ 50 ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದರು. ಪ್ರಕರಣದ ಕುರಿತಂತೆ ಪೊಲೀಸರು ಮತ್ತಷ್ಟು ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ.