ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ರಸ್ತೆ ಗುಂಡಿಗಳಿಂದ ಅನೇಕ ಅಪಘಾತ ಪ್ರಕರಣಗಳು ನಡೆಯುತ್ತವೆ. ಇದೀಗ ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡ ಟ್ವೀಟ್ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಒಬ್ಬ ಸಚಿವರು ಟ್ವೀಟ್ ಮೂಲಕ ಮನವಿ ಮಾಡಿಕೊಂಡರು ಸಹ ಅಧಿಕಾರಿಗಳು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇದೀಗ ಸಚಿವರ ಟ್ವೀಟ್ ಚರ್ಚೆಗೆ ಗ್ರಾಸವಾಗಿದೆ.
ಹೌದು ವೀರಣ್ಣನ ಪಾಳ್ಳದ ಬಳಿ ರಸ್ತೆ ಗುಂಡಿ ಮುಚ್ಚುವಂತೆ ಕೃಷ್ಣ ಬೈರೇಗೌಡ ವಿಡಿಯೋ ಜೊತೆಗೆ ಸಾಮಾಜಿಕ ಜಾಲತಾಣ ಎಕ್ಷ್‌ನಲ್ಲಿ ಪೋಸ್ಟ್ ಹಾಕಿದ್ದರು. ಬಿಬಿಎಂಪಿ ಆಯುಕ್ತರಾಗಲಿ ಅಥವಾ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಲಿ ದಯವಿಟ್ಟು ರಸ್ತೆ ಗುಂಡಿಯನ್ನು ಮುಚ್ಚಿ ಎಂದು ಮನವಿ ಮಾಡಿದ್ದರು. ಕಂದಾಯ ಸಚಿವರೇ ರಸ್ತೆ ಗುಂಡಿಯನ್ನು ಮುಚ್ಚಲು ಅಧಿಕಾರಿಗಳ ಬಳಿ ಬಹಿರಂಗವಾಗಿ ಮನವಿ ಮಾಡುವ ಪರಿಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
ಇದೇ ವಿಚಾರವಾಗಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ, ಅಧಿಕಾರಿಗಳಿಗೆ ಮಾಹಿತಿ ಕೊಡಲು ನಾನಾ ಮಾದರಿಗಳು ಇವೆ. ಅದಕ್ಕೆ ಬೇರೆ ಬಣ್ಣ ಕೊಟ್ಟರೆ ಅವರವರಿಗೆ ಬಿಟ್ಟಿದ್ದು. ಕೆಲಸ ಆಗಬೇಕಾ ಅಥವಾ ಕೆಲಸದ ಬಗ್ಗೆ ಚರ್ಚೆ ಆಗಬೇಕಾ? ಯಾವ ಮಾಧ್ಯಮದ ಮೂಲಕ ಎಂಬುವುದು ಬೇರೆ ವಿಚಾರ. ಕೆಲಸ ಆಗಬೇಕು ಅಷ್ಟೇ ಎಂದರು.
ನಮ್ಮ ಉದ್ದೇಶ ಕೆಲಸ ಸರಿಯಾಗಬೇಕು ಎಂದಾಗಿದೆ. ರಸ್ತೆ ಗುಂಡಿ ರಿಪೇರಿಗೆ ಡಿಸಿಎಂ ಸೂಚನೆ ಕೊಟ್ಟಿದ್ದಾರೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡಬೇಕು. ರಸ್ತೆ ರಾಜ ಕಾಲುವೆ ಕೆಲಸ ಮಾಡಬೇಕು. ಅಧಿಕಾರಿಗಳ ಬೇಜಾವಾಬ್ದಾರಿಯಿಂದ ಜನರಿಗೆ ತೊಂದರೆ ಆಗಬಾರದು. ನನ್ನ ಮೊದಲ ಆದ್ಯತೆ ಜನರು ನಂತರ ಸರ್ಕಾರ. ಸರ್ಕಾರಕ್ಕೆ ಒಳ್ಳೆ ಹೆಸರು ಬರಬೇಕಾದರೆ ಅಧಿಕಾರಿಗಳು ಎಚ್ಚೆತ್ತು ಕೆಲಸ ಮಾಡಬೇಕು. ಬಿಬಿಎಂಪಿ ಕಮಿಷನರ್ ಗೆ ಈ ಪರಿಸ್ಥಿತಿಯ ಬಗ್ಗೆ ಚಿತ್ರಣ ಕಳಿಸಿಕೊಟ್ಟರೆ ಅವರ ಗಮನದಲ್ಲಿ ಇರುತ್ತೆ ಎಂಬ ಉದ್ದೇಶದಿಂದ ಟ್ವೀಟ್ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.
ವೀರಣ್ಣಪಾಳ್ಯದಿಂದ ಹೆಬ್ಬಾಳ ಕಡೆಗಿನ ರಿಂಗ್ ರೋಡಿನ ಸರ್ವಿಸ್ ರಸ್ತೆಯ ವಿಡಿಯೋವನ್ನು ಸಾರ್ವಜನಿಕರು ನನಗೆ ಕಳಿಸಿದ್ದಾರೆ. @bbmpcommr ಅಥವಾ @BMRCL MD ಯಾರಾದ್ರೂ ಆಗಲಿ ದಯವಿಟ್ಟು ಗುಂಡಿಯನ್ನು ಮುಚ್ಚಿ ರಸ್ತೆ ದುರಸ್ಥಿ ಮಾಡಿ ಸಾರ್ವಜನಿಕರ ಸಮಸ್ಯೆಯನ್ನು ಪರಿಹರಿಸಿ. pic.twitter.com/qRDqy5NEzZ
— Krishna Byre Gowda (@krishnabgowda) August 14, 2024