ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ 13 ವರ್ಷದ ಬಾಲಕನನ್ನು ಅಪಹರಣ ಮಾಡಿ ಭೀಕರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಇದೀಗ ಬಿಗ್ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಆರೋಪಿಗಳು ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ.
ಹೌದು ಪೊಲೀಸರು ಆರೋಪಿಗಳ ವಿಚಾರಣೆ ಮಾಡುವಾಗ ಈ ಒಂದು ವಿಚಾರ ಬೆಳಕಿಗೆ ಬಂದಿದೆ. ಸೈಕೋ ಗುರುಮೂರ್ತಿ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದನು. ನಂತರ ಬಾಲಕನ ಗಂಟಲಿಗೆ ಚಾಕು ಚುಚ್ಚಿ ಕೊಲೆ ಮಾಡಿ ಶವ ಸುಟ್ಟು ಹಾಕಿದ್ದನು. ನಂತರ ಬಾಲಕನ ಪೋಷಕರಿಗೆ ಕರೆ ಮಾಡಿ ನಿನ್ನ ಮಗನನ್ನು ಕಿಡ್ನ್ಯಾಪ್ ಮಾಡಿದ್ದೇವೆ, 5 ಲಕ್ಷ ಹಣ ಕೊಟ್ಟು ಮಗನನ್ನು ಬಿಡಿಸಿಕೊಂಡು ಹೋಗಿ ಎಂದು ಡಿಮ್ಯಾಂಡ್ ಮಾಡಿ ಕಥೆ ಕಟ್ಟಿದ್ದನು.
ಪ್ರಕರಣ ಹಿನ್ನೆಲೆ?
ಅರಕೆರೆಯ ವಿಜಯ ಬ್ಯಾಂಕ್ ಕಾಲೋನಿಯ ಅಚ್ಯುತ್ ರೆಡ್ಡಿ ಅವರ ಪುತ್ರ ನಿಶ್ಚಿತ್(13) ಹತ್ಯೆಯಾದ ಬಾಲಕ. ಮನೆಯ ಸಮೀಪ ಟ್ಯೂಷನ್ ಗೆ ಹೋಗಿ ಮರಳುವಾಗ ಗುರುವಾರ ಸಂಜೆ 7:30ಕ್ಕೆ ಆತನನ್ನು ಅಪಹರಿಸಿದ ದುಷ್ಕರ್ಮಿಗಳು ಬನ್ನೇರುಘಟ್ಟ ರಸ್ತೆಯ ಸಮೀಪ ಕತ್ತು ಸೀಳಿ ಕೊಲೆ ಮಾಡಿ ಶವಕ್ಕೆ ಬೆಂಕಿ ಹಚ್ಚಿದ್ದಾರೆ. ಪ್ರಕರಣ ದಾಖಲಾದ ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಇಬ್ಬರು ಆರೋಪಿ ಗುರುಮೂರ್ತಿ ಮತ್ತು ವೇಣುಗೋಪಾಲ್ ಮೇಲೆ ಫೈರಿಂಗ್ ಮಾಡಿ ಬಂಧಿಸಿದ್ದರು.
ಟ್ಯೂಷನ್ ಗೆ ಹೋಗಿದ್ದ ಬಾಲಕ ಮನೆಗೆ ಬಾರದಿದ್ದಾಗ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಠಾಣೆ ಡಿಸಿಪಿ ನಾರಾಯಣ್ ಸೇರಿದಂತೆ ಹಿರಿಯ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಪೋಷಕರಿಗೆ ಕರೆ ಮಾಡಿದ್ದ ಅಪಪಹರಣಕಾರರು ಹಣಕ್ಕೆ ಒತ್ತಾಯಿಸಿದ್ದರು. ಆದರೆ, ಪೊಲೀಸರು ಆರೋಪಿಗಳ ಸುಳಿವು ಪತ್ತೆ ಹಚ್ಚುವ ವೇಳೆಗೆ ಕೊಲೆ ಮಾಡಿದ್ದಾರೆ.
ಆರೋಪಿಗಳನ್ನು ಬಂಧಿಸಲು ತೆರಳಿದ್ದ ವೇಳೆ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ 6 ಸುತ್ತು ಫೈರಿಂಗ್ ಮಾಡಿ ವಶಕ್ಕೆ ಪಡೆಯಲಾಗಿತ್ತು. ಆನೇಕಲ್ ತಾಲೂಕು ವ್ಯಾಪ್ತಿಯ ಕಗ್ಗಲೀಪುರ ರಸ್ತೆಯ ನಿರ್ಜನ ಪ್ರದೇಶದಲ್ಲಿ ಶವ ಪತ್ತೆಯಾಗಿತ್ತು. ಮನೆಯಲ್ಲಿ ಕೆಲಸ ಮಾಡುತ್ತಿದ್ದ ಚಾಲಕ ಗುರುಮೂರ್ತಿ ಕೃತ್ಯದ ಹಿಂದಿದ್ದಾನೆ ಎಂಬುದನ್ನು ಪೊಲೀಸರು ತಿಳಿದು ಆರೋಪಿಯನ್ನು ಬಂಧಿಸಿದ್ದರು.