ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ಸಮೀಪದ ಶ್ರೀಕಂಠೇಶ್ವರ ನಗರದ ಮನೆಯಲ್ಲಿ ಇತ್ತೀಚೆಗೆ ನಡೆದಿದ್ದ ಗೃಹಿಣಿ ಆತ್ಮಹತ್ಯೆ ಎನ್ನಲಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪತಿಯೇ ಸುಪಾರಿ ಕೊಟ್ಟು ಪತ್ನಿಯನ್ನು ಹತ್ಯೆ ಮಾಡಿಸಿರುವುದು ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ.
ಶ್ರೀಕಂಠೇಶ್ವರ ನಗರದ ನಿವಾಸಿ ಪುಷ್ಪಲತಾ ಕೊಲೆಗೈದ ಆರೋಪದ ಹಿನ್ನೆಲೆಯಲ್ಲಿ ಪತಿ ಶಿವಶಂಕರ್ ಹಾಗೂ ಆತನ ಸ್ನೇಹಿತ ವಿನಯ್‌ನನ್ನು ಪೊಲೀಸರು ಇದೀಗ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪತ್ನಿ ಪುಷ್ಪಲತಾ ಶೀಲ ಶಂಕಿಸಿ ಪತಿ ಶಿವಶಂಕರ್ ಆಗಾಗ್ಗೆ ಜಗಳವಾಡುತ್ತಿದ್ದ. ಆಕೆಯನ್ನು ಕೊಲೆ ಮಾಡಲು ಸ್ನೇಹಿತ ವಿನಯ್‌ಗೆ ಸುಪಾರಿ ಕೊಟ್ಟಿದ್ದ ಎನ್ನಲಾಗುತ್ತಿದೆ.
ಫೆ.5ರಂದು ಪುಷ್ಪಲತಾ ಒಬ್ಬರೇ ಮನೆಯಲ್ಲಿದ್ದಾಗ ವಿನಯ್ ಹೋಗಿ, ಸಿಸಿ ಕ್ಯಾಮರಾ ಆಫ್ ಮಾಡಿಸಿದ ಪತಿ ಕುತ್ತಿಗೆ ಬಿಗಿದು ಕೊಲೆ ಮಾಡಿ ನಂತರ ಕಿಟಕಿಗೆ ಹಗ್ಗದಿಂದ ನೇಣು ಬಿಗಿದುಕೊಂಡಂತೆ ಬಿಂಬಿಸಿ ಪರಾರಿಯಾಗಿದ್ದ. ಸುದ್ದಿ ತಿಳಿದು ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ, ಮೇಲ್ನೋಟಕ್ಕೆ ಆತ್ಮಹತ್ಯೆ ಎಂಬುದು ಕಂಡುಬಂದಿತ್ತು. ಮರಣೋತ್ತರ ವರದಿಯಲ್ಲಿ ಕೊಲೆ ಎಂಬುದು ದೃಢಪಟ್ಟಿದೆ.
ತನಿಖೆ ಕೈಗೊಂಡ ಪೊಲೀಸರು 200 ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿ, ಆರೋಪಿ ವಿನಯ್‌ನ ಬಂಧನ ಮಾಡಿದ್ದಾರೆ. ಜತೆಗೆ ಪುಷ್ಪಲತಾ ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬ್ಯಾಂಕ್‌ವೊಂದರಲ್ಲಿ ವಿನಯ್ ಐದು ವರ್ಷಗಳ ಹಿಂದೆ ಶಿವಶಂಕರ್‌ಗೆ ಪರಿಚಯವಾಗಿದ್ದ. ಮೂರು ವರ್ಷಗಳಿಂದ ತನ್ನ ಪತ್ನಿಯನ್ನು ಕೊಲೆ ಮಾಡಬೇಕು ಎಂದು ಶಿವಶಂಕರ್ ಓಡಾಡುತ್ತಿದ್ದ. ಆದರೆ ಧೈರ್ಯ ಸಾಕಾಗದೆ ಸುಮ್ಮನಾಗಿದ್ದ. ಅಂತಿಮವಾಗಿ ವಿನಯ್‌ಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.