ಬೆಂಗಳೂರು: ಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆಯೊಬ್ಬರ ಚಿನ್ನಾಭರಣಗಳನ್ನು ಆಸ್ಪತ್ರೆಯ ಸಿಬ್ಬಂದಿ ಕಳವು ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರ್ಜಾಪುರ ರಸ್ತೆಯ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಅನುಮಾನ ವ್ಯಕ್ತವಾಗಿದೆ.
ಸಾಫ್ಟ್‌ವೇರ್ ಎಂಜಿನಿಯರ್ ಕಿಶೋರ್ ಅವರ ಪತ್ನಿ ಡಿ.25ರಂದು ಚಿಕಿತ್ಸೆಗೆ ದಾಖಲಾಗಿದ್ದರು. ಡಿ.27ರಂದು ಶಸ್ತ್ರಚಿಕಿತ್ಸೆಗಾಗಿ ಕರೆದೊಯ್ಯುವಾಗ ಚಿನ್ನಾಭರಣಗಳು ಮೈಮೇಲಿದ್ದವು. ಆದರೆ, ಶಸ್ತ್ರಚಿಕಿತ್ಸೆ ಬಳಿಕ ಹೊರಬಂದಾಗ ಮಾಂಗಲ್ಯ, ಚಿನ್ನದ ಸರ ಸೇರಿದಂತೆ 72 ಗ್ರಾಂ ಚಿನ್ನಾಭರಣ ಇರಲಿಲ್ಲವೆಂದು ಆರೋಪಿಸಿ, ಕಿಶೋರ್ ಅವರು ದೂರು ನೀಡಿದ್ದಾರೆ’ ಎಂದು ಪೊಲೀಸರು ಹೇಳಿದರು.ಆಸ್ಪತ್ರೆ ಸಿಬ್ಬಂದಿಯ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಚಿನ್ನ ಸಾಗಣೆ: 12 ಮಂದಿ ಬಂಧನ
ಬೆಂಗಳೂರು: ದಾಖಲೆಯಿಲ್ಲದೆ ವಿಮಾನಗಳ ಮೂಲಕ ತಂದಿದ್ದ ₹1.29 ಕೋಟಿ ಮೌಲ್ಯದ ಚಿನ್ನಾಭರಣವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದು 12 ಮಂದಿಯನ್ನು ಬಂಧಿಸಿದ್ದಾರೆ.ವಿದೇಶದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ 12 ಮಂದಿ, 2 ಕೆ.ಜಿ 86 ಗ್ರಾಂ ಚಿನ್ನವನ್ನು ತಂದಿದ್ದರು. ಮಸ್ಕತ್ ಮತ್ತು ಮದೀನಾದಿಂದ ಬಂದಿದ್ದವರನ್ನು ಪರಿಶೀಲನೆ ನಡೆಸಲಾಯಿತು. 11 ಮಹಿಳೆಯರು ಹಾಗೂ ಒಬ್ಬ ಪುರುಷನನ್ನು ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ‘ಎಕ್ಸ್’ ಖಾತೆಯಲ್ಲಿ ಟ್ವೀಟ್ ಮೂಲಕ ತಿಳಿಸಿದ್ದಾರೆ.