ಬೆಂಗಳೂರು : ಬೆಂಗಳೂರಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಭರ್ಜರಿ ಕಾರ್ಯಚರಣೆ ನಡೆಸಿದ್ದು, ಆನೆಯ ದಂತಗಳನ್ನು ಕಳ್ಳತನ ಮಾಡಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಎರಡು ಆನೆ ದಂತಗಳ ಸಮೇತ ಬಂಧಿಸಿದ್ದಾರೆ.
ಹೌದು ಬೆಂಗಳೂರಿನ ರಾಜನುಕುಂಟೆ ಏರ್ಪೋಟ್ ರಸ್ತೆ ಸಾದರಹಳ್ಳಿ ಬಳಿ ಆರೋಪಿಗಳಾದ ಮೋಹನ್, ಆನಂದ್ ಹಾಗೂ ವಿನೋದ್ ಎಂಬುವವರನ್ನು ಬಂಧಿಸಿದ್ದಾರೆ. ಬಂಧಿತರಿಂದ ಬೆಲೆ ಬಾಳುವ 8.5 ಮತ್ತು 9 ಕೆ.ಜಿ ಎರಡು ಆನೆ ದಂತವನ್ನು ಜೊತೆಗೆ ಕೃತ್ಯಕ್ಕೆ ಬಳಸಲಾದ ಕಾರೊಂದನ್ನು ವಶಕ್ಕೆ ಪಡೆಯಲಾಗಿದೆ.
ಆನೆಯ ದಂತಗಳನ್ನು ಮಾರಾಟಕ್ಕಾಗಿ ತೆಗೆದುಕೊಂಡು ಹೋಗುತ್ತಿರುವ ಕುರಿತು ಬೆಂಗಳೂರು ನಗರ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಖಚಿತ ಮಾಹಿತಿ ಬರುತ್ತದೆ. ಕೂಡಲೇ ಕಾರ್ಯಪ್ರವೃತ್ತರಾಗಿ, ಬೆಂಗಳೂರು ವಲಯ ವ್ಯಾಪ್ತಿಯಲ್ಲಿ ವಾಹನವನ್ನ ತಡೆದು, ಪರೀಕ್ಷಿಸಲಾಗುತ್ತದೆ. ಈ ವೇಳೆ ವಾಹನದಲ್ಲಿ ಎರಡು ಆನೆ ದಂತಗಳು ಕಂಡುಬರುತ್ತವೆ. ಕೂಡಲೇ ಕೃತ್ಯದಲ್ಲಿ ಭಾಗಿಯಾಗಿರುವ ಮೂವರು ಆರೋಪಿಗಳಾದ ಮೋಹನ್, ಆನಂದ್ ಹಾಗೂ ವಿನೋದ್ ಎಂಬುವವರನ್ನು ಬಂಧಿಸಲಾಗಿದೆ.