ಬೆಂಗಳೂರು : ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗೆ ಮಹಿಳೆಯೊಬ್ಬರು ಚಿಕಿತ್ಸೆಗೆ ಎಂದು ತೆರಳಿದ್ದರು. ಈ ವೇಳೆ ಮಹಿಳೆಯ ಚಿನ್ನದ ಸರ ಕಳವು ಮಾಡಿದ ಆರೋಪದಡಿ ಖಾಸಗಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ರಾಜೇಶ್ವರಿ ಎಂಬ ಮಹಿಳೆಯ ಸರ ಕಳುವು ಮಾಡಿರುವ ಆರೋಪದಡಿ ಮೂಡಲಪಾಳ್ಯದ ಖಾಸಗಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಗೋವಿಂದರಾಜ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ರಾಜೇಶ್ವರಿ ಅವರಿಗೆ ಫೆಬ್ರವರಿ 8ರಂದು ತೀವ್ರತರದ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾತ್ರಿ ತಮ್ಮ ಪತಿಯೊಂದಿಗೆ ಮೂಡಲಪಾಳ್ಯದ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ, ಕರ್ತವ್ಯದಲ್ಲಿದ್ದ ವೈದ್ಯರು ತಪಾಸಣೆ ನಡೆಸಿ ಇಸಿಜಿ ಮಾಡಿಸಲು ಸೂಚಿಸಿದ್ದರು. ಇಸಿಜಿ ಮಾಡುವ ಮುನ್ನ ಮಾಂಗಲ್ಯ ಸರ ಬಿಚ್ಚಿ ತಮ್ಮ ಪತಿಯ ಕೈಗೆ ನೀಡಲು ರಾಜೇಶ್ವರಿ ಅವರನ್ನು ತಡೆದಿದ್ದ ನರ್ಸ್, ದಿಂಬಿನ ಕೆಳಗಿರಿಸಲು ಸೂಚಿಸಿದ್ದರು ಎಂದು ಆರೋಪಿಸಲಾಗಿದೆ.
ತಪಾಸಣೆ ಮುಗಿದ ನಂತರ ಸರ ಮರೆತಿದ್ದ ರಾಜೇಶ್ವರಿ ಮನೆಗೆ ತೆರಳಿದ್ದಾರೆ. ಬೆಳಗ್ಗೆ ಸ್ನಾನ ಮಾಡುವಾಗ ಮಾಂಗಲ್ಯ ಸರವನ್ನ ರಾತ್ರಿ ಆಸ್ಪತ್ರೆಯಲ್ಲಿ ಬಿಟ್ಟು ಬಂದಿರುವುದು ನೆನಪಾಗಿದೆ. ತಕ್ಷಣ ಆಸ್ಪತ್ರೆಗೆ ಹೋಗಿ ಚಿನ್ನದ ಸರದ ಬಗ್ಗೆ ವಿಚಾರಿಸಿದಾಗ, ಆಸ್ಪತ್ರೆಯವರಿಂದ ಚಿನ್ನದ ಸರ ಇಲ್ಲ ಎಂದು ಬೇಜವಾಬ್ದಾರಿ ಉತ್ತರ ಬಂದಿದೆ.ಗೋವಿಂದರಾಜ ನಗರ ಠಾಣೆಗೆ ದೂರು ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.