ಬೆಂಗಳೂರು : ಬೆಂಗಳೂರಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಗಣೇಶ ಮೆರವಣಿಗೆಯಲ್ಲಿ ಪಟಾಕಿ ಸ್ಫೋಟಗೊಂಡು ಬಾಲಕನೊಬ್ಬ ಸಾವನ್ನಪ್ಪಿ, ಪೋಲೀಸ್ ಸಿಬ್ಬಂದಿ ಸೇರಿದಂತೆ 6 ಮಂದಿ ಗಾಯಗೊಂಡಿರುವ ಘಟನೆ ದೊಡ್ಡಬಳ್ಳಾಪುರ ನಗರದಲ್ಲಿ ಸಂಭವಿಸಿದೆ.
ದೊಡ್ಡಬಳ್ಳಾಪುರ ನಗರದ ಮುತ್ತೂರು ವಾರ್ಡ್ನಲ್ಲಿ ಶುಕ್ರವಾರ ಸಂಜೆ 6 ಗಂಟೆ ಸಮಯದಲ್ಲಿ ಘಟನೆ ನಡೆದಿದೆ. ಫ್ರೆಂಡ್ಸ್ ವಿನಾಯಕ ಬಳಗ ಗಣೇಶನ ವಿಸರ್ಜನೆ ಮಾಡಲು ಮೆರವಣಿಗೆಯಲ್ಲಿ ಹೊರಟಿತ್ತು. ಪೋರ್ ಲಿಫ್ಟ್ ವಾಹನದಲ್ಲಿ ಗಣೇಶನ ಮೆರವಣಿಗೆ ಮಾಡಲಾಗುತ್ತಿತ್ತು.
ಈ ವೇಳೆ ಪೋರ್ ಲಿಫ್ಟ್ ವಾಹನದಲ್ಲಿ ಇಡಲಾಗಿದ್ದ ಪಟಾಕಿಗಳು ಸ್ಫೋಟಗೊಂಡು ಅನಾಹುತಕ್ಕೆ ಕಾರಣವಾಗಿದೆ. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಬಸವರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದರು, ಆಸ್ಪತ್ರೆಯಲ್ಲಿ ಗಾಯಾಳುಗಳನ್ನ ಭೇಟಿ ಮಾಡಿದರು.
ವಾಹನದಲ್ಲಿ ಗಣೇಶನನ್ನ ಮೆರವಣಿಗೆ ಮಾಡುವಾಗ, ಕಾರ್ಯಕ್ರಮದ ಆಯೋಜಕರು ವಾಹನದ ಸೈಲೆಂಸ್ಸರ್ ಪಕ್ಕದಲ್ಲಿಯೇ ಪಟಾಕಿ ಇಟ್ಟಿದ್ದರು. ಸೈಲೆಂಸ್ಸರ್ ತಾಪಕ್ಕೆ ಪಟಾಕಿಗಳು ಸ್ಫೋಟಗೊಂಡಿವೆ. ರಾಕೆಟ್ ಗಳು ಸುತ್ತಮುತ್ತ ಹಾಗೂ ಕೆಲವು ವ್ಯಕ್ತಿಗಳ ಮೇಲೆ ನುಗ್ಗಿವೆ.
ರಾಕೆಟ್ ಗಳು 12 ವರ್ಷದ ಬಾಲಕ ತನುಷ್ ರಾವ್ ಪೆಕ್ಕೆಲುಬುಗಳಿಗೆ ನುಗ್ಗಿದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಮತ್ತೊಂದು ಮಗುವಿನ ಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದು, ಒಬ್ಬ ಬಾಲಕ ಸಾವನ್ನಪ್ಪಿದ್ದು, ಇನ್ನುಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.