ಬೆಂಗಳೂರು : ಅತಿಯಾದ ಟ್ರಾಫಿಕ್, ಜನದಟ್ಟಣೆ, ವಾಹನಗಳ ಸೌಂಡ್ ಹಾರ್ನ್ ಇದೆಲ್ಲವೂ ಬೆಂಗಳೂರಿನ ಜನತೆಗೆ ನಿತ್ಯ ದರ್ಶನವಾಗಿದೆ. ಇದಲ್ಲದರ ಮಧ್ಯ ಕೂಡ ಕಾರು ಚಾಲಕನೊಬ್ಬ ಸಿಗ್ನಲ್ ಬಳಿ ನಿದ್ರೆಗೆ ಜಾರಿರುವ ಘಟನೆ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ಹಾಗೂ ಸಿಲ್ಕ್ ಬೋರ್ಡ್ ರಸ್ತೆಯಲ್ಲಿ ನಡೆದಿದೆ.
ಹೌದು ಸಂಚಾರ ದಟ್ಟಣೆ ಹಾಗೂ ವಾಹನಗಳ ಜೋರು ಹಾರ್ನ್ ಶಬ್ದದ ನಡುವೆಯೂ ನಡು ರಸ್ತೆಯಲ್ಲಿ ಚಾಲಕನೊಬ್ಬ ಕಾರಿನಲ್ಲಿ ಯೇ ನಿದ್ದೆಗೆ ಜಾರಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಕುಟುಂಬದ ಸದಸ್ಯರ ಜತೆಗೆ ಪ್ರವಾಸಕ್ಕೆ ತೆರಳಿ ಸುಸ್ತಾಗಿದ್ದ ಕಾರು ಚಾಲಕ, ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಕಾರನ್ನು ರಸ್ತೆಯಲ್ಲಿ
ನಿಲ್ಲಿಸಿದ್ದಾರೆ.
ಈ ವೇಳೆ ಕಣ್ಣು ಮುಚ್ಚಿ ನಿದ್ದೆಗೆ ಜಾರಿದ್ದಾರೆ. ಈ ನಡುವೆ ದಟ್ಟಣೆ ಕಡಿಮೆ ಯಾಗಿ ವಾಹನಗಳು ಮಂದಗತಿಯಲ್ಲಿ ಮುಂದಕ್ಕೆ ಚಲಿಸಿವೆ. ಆದರೂ ಚಾಲಕ ನಿದ್ದೆಯಿಂದ ಎಚ್ಚರಗೊಂಡಿಲ್ಲ. ಹಿಂದಿನ ವಾಹನಗಳು ಜೋರಾಗಿ ಹಾರ್ನ್ ಮಾಡಿದರೂ ಚಾಲಕ ಎಚ್ಚರಗೊಂಡಿಲ್ಲ. ಬಳಿಕ ಸಾರ್ವಜನಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ಚಾಲಕ ಕಾರಿನಲ್ಲಿ ನಿದ್ದೆ ಮಾಡುತ್ತಿರುವುದನ್ನು ವಿಡಿಯೋ ಮಾಡಿದ್ದಾರೆ.
ಬಳಿಕ ಕಾರಿನ ಗಾಜು ತಟ್ಟಿ ಚಾಲಕನನ್ನು ಎಚ್ಚರಗೊಳಿಸಿದ್ದಾರೆ. ನಂತರ ಚಾಲಕ ಕಾರನ್ನು ಮುಂದಕ್ಕೆ ಚಲಾಯಿಸಿಕೊಂಡು ತೆರಳಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರು ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಬಗ್ಗೆ ಚರ್ಚೆಗಳು ಆರಂಭವಾಗಿವೆ.