ಬೆಂಗಳೂರು : ಮನೆ ಖಾಲಿ ಮಾಡುವ ವಿಚಾರಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದ ಆರೋಪಿಯನ್ನು ವಿವೇಕ್ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇನಾಯತ್ ಪಾಷಾ ಎಂಬಾತನನ್ನು ಹತ್ಯೆಗೈದಿದ್ದ ಆರೋಪದಡಿ ಮಸ್ರೂರ್ ಅಹಮದ್ ಎಂಬವನನ್ನು ಬಂಧಿಸಲಾಗಿದೆ. ಮಾರ್ಚ್ 1ರಂದು ರಾತ್ರಿ ಆಸ್ಟಿನ್ ಟೌನ್‌ನಲ್ಲಿ ಇನಾಯತ್ ಪಾಷಾನ ಹತ್ಯೆಯಾಗಿತ್ತು.
ಒಂಟಿಯಾಗಿದ್ದ ಇನಾಯತ್ ಪಾಷಾ, ಕಳೆದ 11 ವರ್ಷಗಳಿಂದ ಬೆಂಗಳೂರಿನ ವಿವೇಕ ನಗರದ ಆಸ್ಟಿನ್ ಟೌನ್‌ನಲ್ಲಿ ತನ್ನ ಮಾವನ ಮನೆಯಲ್ಲಿ ಇನಾಯತ್ ವಾಸವಾಗಿದ್ದ. ಇತ್ತೀಚಿಗೆ ಕೌಟುಂಬಿಕ ಕಲಹದಿಂದಾಗಿ ಇನಾಯತ್‌ಗೆ ಡಿವೋರ್ಸ್ ಆಗಿತ್ತು. ಬಳಿಕ ಒಂಟಿಯಾಗಿ ವಾಸವಿದ್ದ. ಆದರೆ ಈಗೀಗ ಮಾವ ಮಸೂರ್ ಅಹ್ಮದ್ ಮನೆ ಖಾಲಿ ಮಾಡುವಂತೆ ಇನಾಯತ್‌ಗೆ ಕಿರುಕುಳ ನೀಡೋಕೆ ಶುರು ಮಾಡಿದ್ದ.
ಕಳೆದ ಭಾನುವಾರ ಮನೆಗೆ ಬಂದ ಇನಾಯತ್ ಮಾವ ಮಸೂರ್ ಅಹ್ಮದ್ ಇದೇ ವಿಚಾರಕ್ಕೆ ಗಲಾಟೆ ಮಾಡಿದ್ದಾರೆ. ಇಬ್ಬರು ಕೂಡ ಪರಸ್ಪರ ಜೋರು ಗಲಾಟೆ ಮಾಡ್ಕೊಂಡು, ಹೊಡೆದಾಡಿದ್ದಾರೆ. ಈ ಗಲಾಟೆಯಲ್ಲಿ ಇನಾಯತ್‌ಗೆ ಹಿಗ್ಗಾಮುಗ್ಗ ಥಳಿಸಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದ. ತಕ್ಷಣ ಅಲರ್ಟ್ ಆದ ಮಾವ ಮಸೂರ್ ಅಹ್ಮದ್ ಕುಟುಂಬಸ್ಥರಿಗೆ ಕಾಲ್ ಮಾಡಿ, ಇನಾಯತ್ ಕುಡಿದು ಫಸ್ಟ್ ಫ್ಲೋರ್‌ನಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಹೇಳಿದ್ದ.
ನಂತರ ಸಂಪ್ರದಾಯದಂತೆ ಅಂತ್ಯಕ್ರಿಯೆ ಮಾಡಲು ಕುಟುಂಬಸ್ಥರು ತೀರ್ಮಾನ ಮಾಡಿದರು. ಮಸೀದಿಯಲ್ಲಿ ಪ್ರಾರ್ಥನೆ ಮಾಡಿ, ಇನ್ನೇನು ಮೃತದೇಹವನ್ನು ತೆಗೆದುಕೊಂಡು ಹೋಗಬೇಕು ಎನ್ನುವಾಗ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಪೋಸ್ಟ್ ಮಾರ್ಟಂ ರಿಪೋರ್ಟ್‌ನಲ್ಲಿ ಮೃತದೇಹದ ಹಲವು ಕಡೆಗಳಲ್ಲಿ ಗಾಯವಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಆರೋಪಿ ಮಸೂರ್ ಅಹ್ಮದ್ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಅನ್ನೋದು ಬೆಳಕಿಗೆ ಬಂದಿದೆ.








