ಬೆಂಗಳೂರು : ಹೆಲ್ಮೆಟ್ ಧರಿಸದೆ ಬರುವಾಗ ಫೋಟೋ ತೆಗೆಯಲು ಮುಂದಾದ ಕರ್ತವ್ಯ ನಿರತ ಸಂಚಾರಿ ಹೆಡ್ ಕಾನ್ಸ್ಟೇಬಲ್ ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆರಳು ಕಚ್ಚಿ, ಹಲ್ಲೆಗೈದು ಬೆದರಿಕೆ ಹಾಕಿದ ದ್ವಿ ಚಕ್ರ ವಾಹನ ಸವಾರನನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಿಟಿಎಂ ಲೇಔಟ್ ನ ಸೈಯದ್ ಸಫಿ (28) ಬಂಧಿತ ಆರೋಪಿಯಾಗಿದ್ದು,ಆತನ ವಿರುದ್ಧ ವಿಲ್ಸನ್ ಗಾರ್ಡನ್ ಸಂಚಾರ ಠಾಣೆ ಮುಖ್ಯ ಪೇದೆ ಸಿದ್ರಾಮೇಶ್ವರ ಕೌಜಲಗಿ ನೀಡಿದ ನೀಡಿದ ದೂರಿನ ಮೇರೆಗೆ ವಿಲ್ಸನ್ ಗಾರ್ಡನ್ ನಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನ ಬಂಧಿಸಿದ್ದಾರೆ.
ಏನಿದು ಘಟನೆ?:
ವಿಲ್ಸನ್ ಗಾರ್ಡನ್ ಸಂಚಾರಿ ಠಾಣೆಯ ಹೆಡ್ ಕಾನ್ಸ್ಟೇಬಲ್ ಗಳಾದ ಸಿದ್ಧರಾಮೇಶ್ವರ ಕೌಜಲಗಿ ಮತ್ತು ಲೋಕೇಶ್ ಅವರು ಸೋಮದಾರ ಡಾ.ಮರೀಗೌಡ ರಸ್ತೆಯ 10ನೇ ಕ್ರಾಸ್ ಜಂಕ್ಷನ್ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುಕಗ ಆರೋಪಿ ಸೈಯದ್ ಸಫಿ ಹೆಲ್ಮೆಟ್ ಧರಿಸದೆ ಅದೇ ಮಾರ್ಗದಲ್ಲಿ ಬಂದಿದ್ದಾನೆ. ಇದನ್ನು ನೋಡಿದ ಹೆಡ್ ಕಾನ್ಸ್ಟೇಬಲ್ ಸಿದ್ದರಾಮೇಶ್ವರ ಮೊಬೈಲಲ್ಲಿ ಫೋಟೋ ಕ್ಲಿಕ್ಕಿಸಿ FTVR ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
ಇದನ್ನು ನೋಡಿದ ಆರೋಪಿ ಸೈಯದ್ ಸಫಿ ಸಿದ್ರಾಮೇಶ್ವರ ಕೌಜಲಗಿ ಹತ್ತಿರ ಬಂದು ಎ ನನ್ನ ಫೋಟೋ ಏಕೆ ತೆಗೆಯುತ್ತಿರುವೆ? ನನ್ನ ಗಾಡಿ ನಂಬರ್ ಪ್ಲೇಟ್ ಬಿಚ್ಚಿಕೊಡುವೆ. ಎಷ್ಟು ಕೇಸ್ ಹಾಕುವ ಎಂದು ಮೊಬೈಲ್ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಕೌಜಲಗಿ ಮತ್ತು ಲೋಕೇಶ್ ಅವರು ಬೆನ್ನಟ್ಟಿ ಸೈಯದ್ ಸಫಿಯನ್ನು ಹಿಡಿದು ನಿಲ್ಲಿಸಿದ್ದಾರೆ.
ಈ ವೇಳೆ ಆರೋಪಿಯು ಸಿದ್ದರಾಮೇಶ್ವರ ಕೌಜಲಗಿ ಎಡಗೈ ಬೆರಳು ಹಿಡಿದು ಕಚ್ಚಿ ಗಾಯಗೊಳಿಸಿದ್ದಾನೆ. ಆದರೂ ಹೆಡ್ ಕಾನ್ಸ್ಟೇಬಲ್ ಸಿದ್ದರಾಮೇಶ್ವರ ಆರೋಪಿಯನ್ನು ಬಿಡದೆ ಆತನನ್ನು ಎಳೆದುಕೊಂಡು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ಕರೆತಂದು ದೂರು ನೀಡಿದ್ದಾರೆ. ಇದೀಗ ಹೆಡ್ ಕಾನ್ಸ್ಟೇಬಲ್ ದೂರಿನ ಅನ್ವಯ ಆರೋಪಿಯನ್ನು ಗಾರ್ಡನ್ ಠಾಣೆ ಪೋಲೀಸರು ಬಂಧಿಸಿದ್ದಾರೆ.