ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ 2025-26ನೇ ಸಾಲಿನ ಉದ್ದಿಮೆ ಪರವಾನಿಗೆಯ ನವೀಕರಣದ ಕುರಿತು ಮುಖ್ಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಆ ಮೂಲಕ ಬಿಬಿಎಂಪಿಯಿಂದ ಉದ್ದಿಮೆದಾರರಿಗೆ ಪರವಾನಿಗೆ ನವೀಕರಣಕ್ಕೆ ಸೂಚನೆ ನೀಡಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ 2025-26 ನೇ ಸಾಲಿನ ಉದ್ದಿಮೆ ಪರವಾನಿಗೆ ನವೀಕರಣ ಕಾರ್ಯವನ್ನು ಈ ಕೆಳಕಂಡಂತೆ ಹಮ್ಮಿಕೊಳ್ಳಲು ಸೂಚಿಸಿದೆ.
1. ಉದ್ದಿಮೆದಾರರ ಅನುಕೂಲಕ್ಕೆ ತಕ್ಕಂತೆ 1 ರಿಂದ 5 ಆರ್ಥಿಕ ವರ್ಷಗಳ ಅವಧಿಗೆ (ಏಪ್ರಿಲ್ ನಿಂದ ಮಾರ್ಚ್) ನವೀಕರಣ ಮಾಡಲು ಸೂಚಿಸಿದೆ.
2. ನವೀಕರಣ ಶುಲ್ಕವನ್ನು ಉದ್ದಿಮೆದಾರರು ಕೋರುವ ಆರ್ಥಿಕ ವರ್ಷಕ್ಕೆ ಮಿತಿಗೊಳಿಸಿ ಪಾವತಿಸಿಕೊಳ್ಳಲು ಸೂಚಿಸಿದೆ.
3. ಕಳೆದ ಸಾಲಿನಂತೆ ಉದ್ದಿಮೆ ಪರವಾನಿಗೆ ಶುಲ್ಕವನ್ನು ಆನ್‌ಲೈನ್ ಮುಖಾಂತರ ಹಾಗೂ ಬ್ಯಾಂಕ್ ಚಲನ್ ಮೂಲಕ ಕೆನರಾ ಬ್ಯಾಂಕಿನಲ್ಲಿ ಪಾವತಿಸಿಕೊಳ್ಳಬೇಕಿರುತ್ತದೆ.
4. ದಿನಾಂಕ : 01-02-2025 ರಿಂದ 28-02-2025 ರವರೆಗೆ ದಂಡವಿಲ್ಲದೇ ಪರವಾನಿಗೆ ಶುಲ್ಕವನ್ನು ಪಾವತಿಸಿಕೊಳ್ಳಬೇಕಿರುತ್ತದೆ.
5. ದಿನಾಂಕ : 01-03-2025 ರಿಂದ 31-03-2025 ರವರೆಗೆ ಪರವಾನಿಗೆ ನವೀಕರಣ ಶುಲ್ಕದ ಶೇಕಡಾ 25% ರಷ್ಟು ದಂಡ ಮೊತ್ತದೊಂದಿಗೆ ಪರವಾನಿಗೆ ಶುಲ್ಕವನ್ನು ಪಾವತಿಸಿಕೊಳ್ಳಬೇಕಿರುತ್ತದೆ.
6. ದಿನಾಂಕ : 01-04-2025 ರಿಂದ ಪರವಾನಿಗೆ ಶುಲ್ಕದ ಶೇಕಡಾ 100% ರಷ್ಟು ದಂಡದ ಮೊತ್ತದೊಂದಿಗೆ ಪರವಾನಿಗೆ ಶುಲ್ಕವನ್ನು ಪಾವತಿಸಿಕೊಳ್ಳಬೇಕಿರುತ್ತದೆ.
7. ಪರವಾನಿಗೆ ನವೀಕರಣ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಮುಖಾಂತರವೇ ಮಾಡಲು ಸೂಚಿಸಿದೆ.
ವಲಯ ವರ್ಗಿಕರಣ ನಿಯಮಾವಳಿಯಂತೆ:
* ವಸತಿ ಪ್ರದೇಶದಲ್ಲಿ 40 ಅಡಿ ಅಗಲಕ್ಕಿಂತ ಕಡಿಮೆ ಇರುವ ರಸ್ತೆಗಳಲ್ಲಿ 2015ರ ನಂತರ ಪ್ರಾರಂಭವಾಗಿರುವ ಉದ್ದಿಮೆ ಪರವಾನಿಗೆಯನ್ನು ತಡೆಹಿಡಿದು ಹಿಂಬರಹ ನೀಡಿ ತಿರಸ್ಕರಿಸುವುದು.
* ವಸತಿ ಪ್ರದೇಶದಲ್ಲಿ 40 ಅಡಿ ಅಗಲಕ್ಕಿಂತ ಜಾಸ್ತಿಯಿರುವ ರಸ್ತೆಗಳಲ್ಲಿ 2015ರ ನಂತರ ಪ್ರಾರಂಭವಾಗಿರುವ ಉದ್ದಿಮೆಗಳನ್ನು ಮತ್ತು ನಿಗಧಿಪಡಿಸಿರುವ ಉದ್ದಿಮೆಗಳಿಗೆ ಮಾತ್ರ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ, ಇತರೆ ಉದ್ದಿಮೆಗಳ ಪರವಾನಿಗೆ ನವೀಕರಣವನ್ನು ತಡೆಹಿಡಿದು ಹಿಂಬರಹ ನೀಡಿ ತಿರಸ್ಕರಿಸುವುದು.
ಕಟ್ಟಡ ನಿಯಮಾವಳಿಯಂತೆ:
ಉದ್ದಿಮೆಯು ಅನಧಿಕೃತವಾಗಿ ನಕ್ಷೆ ಉಲ್ಲಂಘನೆಯಾಗಿ ನಿರ್ಮಿಸಿರುವ ಕಟ್ಟಡಗಳಲ್ಲಿ ಪೂರ್ತಿ ಅಥವಾ ಭಾಗಶಃ ಬಳಸುತ್ತಿರುವ ಬಗ್ಗೆ ದೂರುಗಳಿದ್ದಲ್ಲಿ, ವಾಹನ ನಿಲುಗಡೆ ಪ್ರದೇಶದಲ್ಲಿ ಅಥವಾ ರೂಫ್ ಟಾಪ್‌ಗಳಲ್ಲಿ ನಡೆಸುತ್ತಿದ್ದಲ್ಲಿ ಪರವಾನಿಗೆ ನವೀಕರಣವನ್ನು ತಡೆಹಿಡಿದು ಹಿಂಬರಹ ನೀಡಿ ತಿರಸ್ಕರಿಸಲು ತಿಳಿಸಿದೆ.
ಘನತ್ಯಾಜ್ಯ ಮತ್ತು ಸಾರ್ವಜನಿಕ ಆರೋಗ್ಯ ನಿಯಮಾವಳಿಯಂತೆ:
* 100 ಕೆ.ಜಿ.ಗಿಂತ ಜಾಸ್ತಿ ತ್ಯಾಜ್ಯ ಉತ್ಪತ್ತಿ ಮಾಡುವ ಉದ್ದಿಮೆಗಳಿಂದ ಮೂಲ ಸ್ಥಳದಲ್ಲಿ ತ್ಯಾಜ್ಯ ಸಂಸ್ಕರಣೆ ಹಾಗೂ ವಿಲೇವಾರಿಗೆ ಸಂಬಂಧಿಸಿದ ದಾಖಲಾತಿಗಳನ್ನು ಪಡೆದು ಅಥವಾ Empanelled Vendorಗೆ ನೀಡುತ್ತಿದ್ದ ಪಕ್ಷದಲ್ಲಿ ಎಲ್ಲಾ ವಿಧದ ತ್ಯಾಜ್ಯಗಳ ವಿಲೇವಾರಿಗೆ ಅವರೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಪ್ರತಿಯನ್ನು ಪಡೆದು ನವೀಕರಿಸುವುದು.
* ಉಲ್ಲೇಖ ಪತ್ರದಂತೆ ಕಛೇರಿ ಆದೇಶವನ್ನು ಪಾಲಿಸುತ್ತಿರುವ ಬಗ್ಗೆ ಕಲ್ಯಾಣ ಮಂಟಪ ಉದ್ದಿಮೆದಾರರಿಂದ ಲಿಖಿತ ಹೇಳಿಕೆ ಪಡೆದು ಸದರಿ ಕಛೇರಿ ಆದೇಶವನ್ನು ಸ್ಥಳದಲ್ಲಿ ಪ್ರದರ್ಶಿಸಿರುವ ಛಾಯಾ ಚಿತ್ರವನ್ನು ಪಡೆದು ನವೀಕರಿಸುವುದು.
* ಹೋಟೆಲ್ / ರೆಸ್ಟೋರೆಂಟ್ ಮತ್ತು ಆಹಾರ ಸರಬರಾಜು ಮಾಡುವ ಉದ್ದಿಮೆಗಳು ಕಡ್ಡಾಯವಾಗಿ ಪ್ಲಾಸ್ಟಿಕ್ ನಿಷೇಧವನ್ನು ಪಾಲಿಸುವ ಕುರಿತು ಲಿಖಿತ ಹೇಳಿಕೆ ಪಡೆದುಕೊಳ್ಳುವುದು.
* ಉದ್ದಿಮೆ ಸ್ಥಳಗಳಲ್ಲಿ ಪ್ಲಾಸ್ಟಿಕ್ ನಿಷೇಧ ಬಗ್ಗೆ ಹಾಗೂ ಒಮ್ಮೆ ಬಳಸಿ ಬಿಸಾಡುವ ಸಾಮಗ್ರಿಗಳನ್ನು ಉಪಯೋಗಿಸದಂತೆ ಭಿತ್ತಿ ಪತ್ರಗಳನ್ನು ಪ್ರದರ್ಶಿಸಲು ಸೂಚಿಸುವುದು.
* ಉದ್ದಿಮೆ ಸ್ಥಳಗಳಲ್ಲಿ ಹಸಿ ಕಸಕ್ಕೆ (ಹಸಿರು ಬಣ್ಣ) ಮತ್ತು ಒಣ ಕಸಕ್ಕೆ (ನೀಲಿ ಬಣ್ಣ) ಪ್ರತ್ಯೇಕ ಕಸದ ಬುಟ್ಟಿಗಳನ್ನು ಇಟ್ಟುಕೊಂಡು ವೈಜ್ಞಾನಿಕವಾಗಿ ಅದನ್ನು ವಿಲೇವಾರಿ ಮಾಡುವುದು.
ಅದರಂತೆ ವಲಯ ಆರೋಗ್ಯಾಧಿಕಾರಿಗಳು, ಉಪ ಆರೋಗ್ಯಾಧಿಕಾರಿಗಳು, ಆರೋಗ್ಯ ವೈದ್ಯಾಧಿಕಾರಿಗಳು ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಮೇಲಿನ ಅಂಶಗಳನ್ನು ಪರಿಗಣಿಸಿ, 2025-26ನೇ ಸಾಲಿನ ನವೀಕರಣವನ್ನು ಹಮ್ಮಿಕೊಳ್ಳಲು ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಸುತ್ತೋಲೆ ಮೂಲಕ ಸೂಚಿಸಿರುತ್ತಾರೆ.
ಬೆಂಗಳೂರಲ್ಲಿ ಅನಧಿಕೃತ ಜಾಹೀರಾತು ಅಳವಡಿಸೋರ ವಿರುದ್ಧ FIR: ತುಷಾರ್ ಗಿರಿನಾಥ್