ಬೆಳಗಾವಿ : ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದೆ. ಅಲ್ಲದೆ ಕೆಲವು ಕಡೆಗಳಲ್ಲಿ ಆಲಿಕಲ್ಲು ಮಳೆಯಾಗಿದ್ದು ಸಂಪೂರ್ಣವಾಗಿ ಹಿಮಮಯವಾಗಿವೇ. ಬೆಳಗಾವಿಯಲ್ಲಿ ಬಿರುಗಾಳಿ ಹಾಗೂ ಭಾರಿ ಮಳೆಯಿಂದ ಗೋಡಿ ಕುಸಿದು ಮಹಿಳೆ ಒಬ್ಬರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಬೆಳಗಾವಿ ತಾಲೂಕಿನ ಹೊಸೂರ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಪತ್ನಿ ಮೃತಪಟ್ಟು, ಪತಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ವಂಟಮೂರಿ ಗ್ರಾಮದ ಫರ್ವಿನ್ ಶರೀಫ್ ಬೇಪಾರಿ(34) ಮೃತರು. ಶರೀಫ್ ಬೇಪಾರಿ ಅವಘಡದಲ್ಲಿ ಬದುಕುಳಿದ ಪತಿ ಎಂದು ತಿಳಿದುಬಂದಿದೆ.
ಕೋಳಿಗಳನ್ನು ಮಾರಾಟ ಮಾಡಲು ಬೈಕ್‌ನಲ್ಲಿ ದಂಪತಿ ಹೊರಟಿದ್ದರು. ಈ ವೇಳೆ ದಾರಿಯಲ್ಲಿ ಮಳೆ ಹೆಚ್ಚಾಗಿದ್ದು ಹೊಸೂರ ಗ್ರಾಮದ ಬಳಿ ಪಾಳು ಬಿದ್ದ ಮನೆಯ ಕೆಳಗೆ ನೆರಳಲ್ಲಿ ನಿಂತಿದ್ದರು. ಇದೇ ವೇಳೆ ಏಕಾಏಕಿ ಗೋಡೆ ಕುಸಿದು ಬಿದ್ದಿದೆ. ತೀವ್ರವಾಗಿ ಗಾಯಗೊಂಡ ಫರ್ವಿನ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಗಾಯಾಳು ಶರೀಫ್ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.








