ವಾರಣಾಸಿ: ಕಾಶಿಯ ಪವಿತ್ರ ಗಂಗಾನದಿಯಲ್ಲಿ ಬೋಟ್ ಮೇಲೆ ಪಾರ್ಟಿ ಮಾಡುತ್ತಾ ಮದ್ಯ ಸೇವಿಸಿದ ಘಟನೆ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
ವೈರಲ್ ವಿಡಿಯೋದಲ್ಲಿ ಬೋಟ್ ಒಂದರ ಮೇಲೆ ಮ್ಯೂಸಿಕ್ ಸಿಸ್ಟಮ್ ಅಳವಡಿಸಿ, ಯುವಕರು ಮದ್ಯ ಸೇವಿಸುತ್ತಾ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.ಭೇಲುಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೋಣಿ ಅಲಂಕಾರಿಕನಾದ ಅರ್ಜುನ್ ರಾಜ್‌ಭರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳಿಗಾಗಿ ಹುಡುಕಾಟ ಮುಂದುವರಿದಿದೆ.
ಧಾರ್ಮಿಕ ಭಾವನೆಗೆ ಧಕ್ಕೆ: ಗಂಗಾನದಿಯನ್ನು ಅತ್ಯಂತ ಪವಿತ್ರವೆಂದು ಭಾವಿಸುವ ಭಕ್ತರು, ಈ ಕೃತ್ಯವು ಹಿಂದೂ ಧರ್ಮದ ನಂಬಿಕೆಗಳಿಗೆ ಮಾಡಿದ ಅಪಮಾನ ಎಂದು ಕಿಡಿಕಾರಿದ್ದಾರೆ.
ರಾಜಕೀಯ ಕೆಸರೆರಚಾಟ
ಈ ಘಟನೆಯು ರಾಜಕೀಯ ತಿರುವು ಕೂಡ ಪಡೆದುಕೊಂಡಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಈ ಬಗ್ಗೆ ಬಿಜೆಪಿ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ. “ಜನರು ಈಗ ಎಲ್ಲೆಡೆ ಬಿಯರ್ ಕುಡಿಯುತ್ತಿದ್ದಾರೆ. ಬಿಜೆಪಿ ಸರ್ಕಾರ ಬಂದ ಮೇಲೆ ಜನರ ಮೇಲಿನ ಒತ್ತಡ ಮತ್ತು ಸಂಕಷ್ಟಗಳು ಹೆಚ್ಚಾಗಿವೆ, ಹಾಗಾಗಿ ಅವರು ಮದ್ಯದ ಮೊರೆ ಹೋಗುತ್ತಿದ್ದಾರೆ” ಎಂದು ಲಕ್ನೋದಲ್ಲಿ ಪ್ರತಿಕ್ರಿಯಿಸಿದ್ದಾರೆ.
DJ and Beer Party on Boat in #Varanasi Ganga!! pic.twitter.com/ptY0Q2eOLi
— Siraj Noorani (@sirajnoorani) April 6, 2026
ಈ ಹಿಂದಿನ ಘಟನೆಗಳ ನೆನಪು
ಗಂಗಾನದಿಯಲ್ಲಿ ಈ ರೀತಿಯ ವಿವಾದಾತ್ಮಕ ಕೃತ್ಯ ನಡೆಯುತ್ತಿರುವುದು ಇದೇ ಮೊದಲೇನಲ್ಲ:
ಇಫ್ತಾರ್ ಕೂಟ ಮತ್ತು ಬಿರಿಯಾನಿ ವಿವಾದ: ಈ ಹಿಂದೆ ರಂಜಾನ್ ಸಮಯದಲ್ಲಿ ದೋಣಿಯಲ್ಲಿ ಕುಳಿತು ಚಿಕನ್ ಬಿರಿಯಾನಿ ಸೇವಿಸುತ್ತಾ ಇಫ್ತಾರ್ ಕೂಟ ನಡೆಸಿದ ಆರೋಪದ ಮೇಲೆ 14 ಜನರನ್ನು ಬಂಧಿಸಲಾಗಿತ್ತು.ಪವಿತ್ರ ನದಿಗೆ ಬಿರಿಯಾನಿಯ ಎಂಜಲನ್ನು ಎಸೆದು ನದಿಯನ್ನು ಅಶುದ್ಧಗೊಳಿಸಲಾಗುತ್ತಿದೆ ಎಂದು ಬಿಜೆಪಿ ಯುವ ಮೋರ್ಚಾ ಅಂದು ದೂರನ್ನು ನೀಡಿತ್ತು.
ಪ್ರಸ್ತುತ ಘಟನೆಯಲ್ಲಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ತನಿಖೆ ನಡೆಸುತ್ತಿದ್ದು, ಪವಿತ್ರ ತಾಣಗಳಲ್ಲಿ ಇಂತಹ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.








