ಬೆಂಗಳೂರು : ಶ್ರೀ ರಾಮಚಂದ್ರ ತನ್ನ ಆಡಳಿತದ ಅವಧಿಯಲ್ಲಿ ಸ್ತ್ರೀಯರನ್ನು ಅಗೌರವದಿಂದ ನಡೆಸಿಕೊಂಡಿದ್ದ. ಹೀಗಾಗಿ ನಮಗೆ ರಾಮರಾಜ್ಯಕ್ಕಿಂತ ಡಾ. ಬಿ.ಆರ್. ಅಂಬೇಡ್ಕರ್ ಅವರ ಭೀಮರಾಜ್ಯ ಸ್ಥಾಪನೆಯ ಅಗತ್ಯವಿದೆ. ನಾವೆಲ್ಲ ರಾಮ ಆಗುವುದಕ್ಕಿಂತ ಭೀಮನಾಗಬೇಕು ಎಂದು ಚಿತ್ರದುರ್ಗದ ಹರಳಯ್ಯ ಗುರುಪೀಠದ ಶ್ರೀ ಬಸವಹರಳಯ್ಯ ಕರೆ ನೀಡಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಕಾಯಕ ಶರಣರ ಜಯಂತಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವೆಲ್ಲ ಈಗ ರಾಮನ ಹಿಂದೆ ಹೋಗುತ್ತಿದ್ದೇವೆ. ಆದರೆ, ರಾಮ ಸ್ತ್ರೀಯರನ್ನು ಅಗೌರವವಾಗಿ ನಡೆಸಿಕೊಂಡಿದ್ದ. ತಮ್ಮ ಪತ್ನಿ ಸೀತೆಯನ್ನು ಅಗ್ನಿ ಪರೀಕ್ಷೆ ನಡೆಸಿದ್ದ. ಅಷ್ಟೇ ಅಲ್ಲ. ಅನಂತರ ಕಾಡಿಗೂ ಕಳುಹಿಸಿದ್ದ. ಶೂರ್ಪನಖಿಯ ಮೂಗು ಕುಯ್ದಿದ್ದ. ಹೀಗಾಗಿ ನಮಗೆ ರಾಮ ರಾಜ್ಯಕ್ಕಿಂತ, ಡಾ. ಬಿ.ಆರ್. ಅಂಬೇಡ್ಕರ್ ಅವರ ಭೀಮ ರಾಜ್ಯ ಸ್ಥಾಪನೆಯ ಅಗತ್ಯವಿದೆ ಎಂದರು.
ಇತ್ತೀಚೆಗಷ್ಟೇ ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿದರು. ಕಲ್ಲಿಗೆ ಜೀವ ಕೊಟ್ಟು ಬದುಕಿಸಿದ್ದೇವೆ ಎಂದು ಹೇಳಿ ಜನರನ್ನು ಮೋಸ ಮಾಡಲಾಗುತ್ತಿದೆ.ರಾಮ ಮಂದಿರಕ್ಕೆ ಸುತ್ತೂರು ಮಠದ ಶ್ರೀಗಳನ್ನೇ ಒಳಗೆ ಬಿಡಲಿಲ್ಲ. ಇದು ನಮ್ಮೆಲ್ಲರಿಗೂ ಪಾಠವಾಗಬೇಕು. ನಾವು ದೇವಸ್ಥಾನ ದೊಳಗೆ ಪ್ರವೇಶಿಸದ ಶೂದ್ರರು. ಹೀಗಾಗಿ ನಾವೆಲ್ಲ ದೇವಸ್ಥಾನಗಳನ್ನು ಬಹಿಷ್ಕರಿಸಿ ದೇವಸ್ಥಾ ನವನ್ನೇ ಶೂದ್ರವನ್ನಾಗಿಸಬೇಕು ಎಂದು ಶ್ರೀ ಬಸವಹರಳ್ಳಯ್ಯ ಸ್ವಾಮೀಜಿ ಆಗ್ರಹಿಸಿದರು.