ಯಾವುದೇ ಒಬ್ಬ ವ್ಯಕ್ತಿಯು ಸ್ವಯಂಪ್ರೇರಣೆಯಿಂದ ನೀಡಿದರೂ ಸಹ ಪಾಸ್‌ಪೋರ್ಟ್ ಮತ್ತು ಭಾರತೀಯ ಸಾಗರೋತ್ತರ ನಾಗರಿಕ (ಒಸಿಐ) ಕಾರ್ಡ್‌ಗಳನ್ನು ಬ್ಯಾಂಕ್‌ಗಳು ಸಾಲದ ಭದ್ರತೆಗಾಗಿ ಒತ್ತೆ ಇರಿಸಿಕೊಳ್ಳುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಭಾರತದಲ್ಲಿ ಹುಟ್ಟಿದ್ದು, ಭಾರತದ ಒಸಿಐ ಕಾರ್ಡ್ ಹೊಂದಿರುವ ಯುನೈಟೆಡ್ ಕಿಂಗ್‌ಡಂ ಪ್ರಜೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ನಾಗಪ್ರಸನ್ನ ಅವರು ವಿಚಾರಣೆ ನಡೆಸಿದ್ದಾರೆ. ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಇಬ್ಬರು ವಸತಿ ಸಾಲ ಪಡೆದಿದ್ದರು. ಸಾಲದ ಭದ್ರತೆಗಾಗಿ ಅವರು ತಮ್ಮ ಪಾಸ್‌ಪೋರ್ಟ್ ಮತ್ತು ಒಸಿಐ ಕಾರ್ಡ್ಅನ್ನು ಬ್ಯಾಂಕ್ ನೀಡಿದ್ದರು. ಆದರೆ, ಸಾಲವನ್ನು ಪಾವತಿಸದ ಆರೋಪದ ಮೇಲೆ ಬ್ಯಾಂಕ್ ವಂಚನೆ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು. ಬ್ಯಾಂಕ್ ನಡೆ ಪ್ರಶ್ನಿಸಿ ಅರ್ಜಿದಾರರು ಕೋರ್ಟ್ ಮೆಟ್ಟಿಲೇರಿದ್ದರು. ಯುನೈಟೆಡ್ ಕಿಂಗ್‌ಡಂ ಪ್ರಜೆಯ ಪರವಾಗಿ ವಾದ ಮಂಡಿಸಿದ ವಕೀಲರು, “ಪಾಸ್‌ಪೋರ್ಟ್ ಮತ್ತು ಒಸಿಐ ದಾಖಲೆಗಳನ್ನು ಬ್ಯಾಂಕ್ ತನ್ನ ಬಳಿ ಇಟ್ಟುಕೊಳ್ಳಲು ಅಧಿಕಾರವಿಲ್ಲ. ಯುಕೆ ಸರ್ಕಾರ ನೀಡಿದ ಪಾಸ್‌ಪೋರ್ಟ್ಅನ್ನು ತಡೆಹಿಡಿಯುವ ಅಥವಾ ಇಟ್ಟುಕೊಳ್ಳುವ ಅಧಿಕಾರ ಬ್ಯಾಂಕ್‌ಗಳಿಗೆ ಇಲ್ಲ. ಅಂತೆಯೇ, ಒಸಿಐ ಕಾರ್ಡ್‌ಗಳು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಯಲ್ಲಿವೆ. ಅವುಗಳನ್ನು ಬ್ಯಾಂಕ್ ನಿಯಂತ್ರಿಸಲಾಗದು” ಎಂದು ವಾದಿಸಿದ್ದಾರೆ. ಬ್ಯಾಂಕ್ ವಕೀಲರು, “ಸಾಲಗಾರರೇ ಸ್ವಯಂಪ್ರೇರಣೆಯಿಂದ ತಮ್ಮ ದಾಖಲೆಗಳನ್ನು ಸಾಲದ ಭದ್ರತೆಗಾಗಿ ಒತ್ತೆ ಇಟ್ಟಿದ್ದಾರೆ” ಎಂದು ವಾದಿಸಿದರು. ವಾದ ಪ್ರತಿಪಾದಗಳನ್ನು ಗಮನಿಸಿದ ನ್ಯಾಯಾಲಯವು, “ಯುಕೆ ಪ್ರಜೆಗೆ ಯುಕೆ ಸರ್ಕಾರ ಪಾಸ್‌ಪೋರ್ಟ್ ನೀಡಿದ್ದು, ಅದನ್ನು ಭಾರತದ ಯಾವುದೇ ಕಾನೂನಿನ ಅಡಿಯಲ್ಲಿ ನೀಡಲಾಗಿಲ್ಲ. ಇನ್ನು, ಅರ್ಜಿದಾರರು ಭಾರತದಲ್ಲಿ ಉಳಿದುಕೊಳ್ಳಲು ಒಸಿಐ ಕಾರ್ಡ್ ನೀಡಲಾಗಿದೆ. ಒಸಿಐ ಕಾರ್ಡ್ ಮತ್ತು ಪಾಸ್‌ಪೋರ್ಟ್ ಅನ್ನು ಬ್ಯಾಂಕ್ ಅಧಿಕಾರಿಗಳಲ್ಲಿ ಒತ್ತೆ ಇಡುವುದಾಗಿ ಅರ್ಜಿದಾರರು ಒಪ್ಪಂದದ ಮೂಲಕ ನೀಡಿದ್ದರೂ ಸಹ, ಅವುಗಳನ್ನು 15 ದಿನಗಳಿಗಿಂತ ಹೆಚ್ಚು ಕಾಲ ಇಟ್ಟುಕೊಳ್ಳುವ ಯಾವುದೇ ಅಧಿಕಾರ ಬ್ಯಾಂಕ್‌ಗೆ ಇಲ್ಲ” ಎಂದು ಹೇಳಿದೆ.“ಇನ್ನೊಂದು ವಿಚಾರವೆಂದರೆ, ಒಸಿಐ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯ (ಎಫ್‌ಆರ್‌ಆರ್‌ಒ) ಆಸ್ತಿಯಾಗಿದೆ. ಆ ಕಾರ್ಡ್‌ಅನ್ನು ಸುರಕ್ಷಿತವಾಗಿ ಇರಿಸಲು ಅದನ್ನು ಎಫ್‌ಆರ್‌ಆರ್‌ಒಗೆ ನ್ಯಾಂಕ್ ರವಾನಿಸಬೇಕಿತ್ತು. ಒಂದು ವೇಳೆ, ಕಾನೂನಿನ ಪ್ರಕಾರ ಅಗತ್ಯವಿದ್ದಲ್ಲಿ ಎಫ್‌ಆರ್‌ಆರ್‌ಒಗೆ ಸಂಬಂಧಿತ ಪ್ರಕ್ರಿಯೆಗಳನ್ನು ನಡೆಸಬೇಕಿತ್ತು. ಆದರೆ, ಈ ಪ್ರಕರಣದಲ್ಲಿ ಯಾವುದೂ ನಡೆದಿಲ್ಲ,” ಎಂದು ನ್ಯಾಯಾಲಯ ಗಮನಿಸಿದೆ. ಪಾಸ್‌ಪೋರ್ಟ್ ಮತ್ತು ಒಸಿಐ ಕಾರ್ಡ್ಅನ್ನು ಅವುಗಳ ಮಾಲೀಕರಿಗೆ ಹಿಂತಿರುಗಿಸುವಂತೆ ಆದೇಶಿಸಿದೆಯಾಗಿದೆ.