ಚಿತ್ರದುರ್ಗ : ಸರ್ಕಾರದಿಂದ ರೈತರ ಖಾತೆಗೆ ಜಮೆ ಆಗುವ ಪರಿಹಾರದ ಹಣವನ್ನು ಬ್ಯಾಂಕ್ ನವರು ಸಾಲಕ್ಕೆ ಜಮೆ ಮಾಡಿಕೊಳ್ಳುವಂತಿಲ್ಲ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಮಹತ್ವದ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರೈತರ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಡಿಬಿಟಿ ಮುಖಾಂತರ ರೈತರ ಖಾತೆಗೆ ಜಮೆಯಾಗುವ ಪರಿಹಾರ ಮೊತ್ತವನ್ನು ಬ್ಯಾಂಕ್‍ನವರು ಸಾಲಕ್ಕೆ ಜಮೆ ಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ.
ಬೆಳೆವಿಮೆ ಪರಿಹಾರ, ಬರ ಪರಿಹಾರ, ಪಿಎಂ ಕಿಸಾನ್, ಹಾಲಿನ ಸಹಾಯಧನದ ಮೊತ್ತ, ಉದ್ಯೋಗ ಖಾತ್ರಿಯ ಕೂಲಿ ಮೊತ್ತವನ್ನು ಬ್ಯಾಂಕ್‍ನವರು ರೈತರ ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿರುವ ಬಗ್ಗೆ ರೈತರು, ರೈತ ಮುಖಂಡರು ದೂರಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ರೈತರ ಖಾತೆಗೆ ಜಮೆಯಾಗುವ ಪರಿಹಾರ, ಸಹಾಯಧನ ಮೊತ್ತವನ್ನು ಸರ್ಕಾರವು ನಿರ್ದಿಷ್ಟ ಉದ್ದೇಶಗಳಿಗಾಗಿ ನೀಡುತ್ತಿದ್ದು, ಈ ಮೊತ್ತವನ್ನು ಯಾವುದೇ ಬ್ಯಾಂಕುಗಳು ಸಾಲಗಳಿಗೆ ಜಮೆ ಮಾಡಿಕೊಳ್ಳದೇ ಇರಲು ಕಟ್ಟುನಿಟ್ಟಿನ ನಿರ್ದೇಶನ ನೀಡಿ ಆದೇಶಿಸಿದ್ದಾರೆ.