ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದಿಂದ ಮತ್ತೊಂದು ದಾಖಲೆ ಎನ್ನುವಂತೆ ವಿವಿಧ ಪದವಿ ಕೋರ್ಸ್ ಗಳಿಗೆ ನಡೆದಂತ ಪರೀಕ್ಷೆಯ ನಂತ್ರದ 6 ದಿನಗಳಲ್ಲಿ ಫಲಿತಾಂಶವನ್ನು ಪ್ರಕಟಿಸಿದೆ.
ಈ ಕುರಿತಂತೆ ಬೆಂಗಳೂರು ವಿವಿಯಿಂದ ಮಾಹಿತಿ ನೀಡಲಾಗಿತ್ತು, 6 ದಿನಗಳ ಹಿಂದೆ ಬಿಕಾಂ, ಬಿಬಿಎ ಮತ್ತು ಬಿಸಿಎ ಕೋರ್ಸ್ ಗಳ (ಎನ್ಇಪಿ) ಒಟ್ಟು 26,623 ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಡೆಸಲಾಗಿತ್ತು. 6ನೇ ಸೆಮಿಸ್ಟರ್ ಪರೀಕ್ಷೆ ಫಲಿತಾಂಶವನ್ನು ವಿವಿಯಿಂದ ಕಾಲೇಜುಗಳ ಏಕೀಕೃತ ನಿರ್ವಹಣಾ ವ್ಯವಸ್ಥೆ(UUCMS) ಪೋರ್ಟಲ್ ನಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದೆ.
ವಿವಿಧ ಪದವಿ ಕೋರ್ಸ್ ಗಳಿಗೆ ಜುಲೈ.10ರಿಂದ ಆಗಸ್ಟ್.14ರವರೆಗೆ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆ ಫಲಿತಾಂಶ ಶೀಘ್ರವೇ ನೀಡುವುದಕ್ಕೆ ಕ್ರಮವಹಿಸಲಾಗಿತ್ತು. ಈ ಕಾರ್ಯದಲ್ಲಿ ಉತ್ತಮ ಕೆಲಸ ಮಾಡಿದಂತ ವಿವಿ ಮೌಲ್ಯ ಮಾಪನ ಕುಲಸಚಿವ ಪ್ರೊ.ಸಿ ಶ್ರೀನಿವಾಸ್ ಸೇರಿ ವಿಭಾಗದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳಿಗೆ ಕುಲಪತಿ ಡಾ.ಎಸ್ ಎಂ ಜಯಕರ್ ಅಭಿನಂದಿಸಿದ್ದಾರೆ.
ಇನ್ನೂ ಬಿಎ, ಬಿಎಸ್ಸಿ ಪದವಿಯ ಪರೀಕ್ಷಾ ಮೌಲ್ಯಮಾಪನ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲೇ ಈ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸುವುದಾಗಿ ಬೆಂಗಳೂರು ವಿವಿ ತಿಳಿಸಿದೆ.