ಸಿನಿಮಾಡೆಸ್ಕ್ : ಬನಾರಸ್ ಸಿನಿಮಾ ಇದೀಗ ಸಮಸ್ತ ಪ್ರೇಕ್ಷಕರ ಕುತೂಹಲದ ಕೇಂದ್ರಬಿಂದುವಾಗಿದೆ. ಮೋಷನ್ ಪೋಸ್ಟರ್ ಹಾಗೂ ಮಾಯಗಂಗೆ ಹಾಡಿನ ಮೂಲಕ ಚಿತ್ರಪ್ರೇಮಿಗಳನ್ನು ಸೆಳೆದುಕೊಂಡಿರುವ ಈ ಚಿತ್ರ ಪ್ರೇಕ್ಷಕರನ್ನು ಬಹುವಾಗಿ ಕಾಡುತ್ತಿದೆ. ಅದಕ್ಕೆ ನಾನಾ ಕಾರಣಗಳು. ಚಿತ್ರದ ಕಂಟೆಂಟ್, ತಾರಾಬಳಗ, ಅದ್ಧೂರಿತನ, ಪ್ಯಾನ್ ಇಂಡಿಯಾ ಚಿತ್ರ ಅನ್ನೋ ಕುತೂಹಲ ಹುಟ್ಟಿಸಿರುವ ಬನಾರಸ್ ಸಿನಿಮಾ ಬಿಡುಗಡೆಗೆ ಚಿತ್ರಜಗತ್ತು ನಿರೀಕ್ಷೆಯಿಂದ ಕಾಯುತ್ತಲಿದೆ. ಇದೀಗ ಬನಾರಸ್ ಬೆಳ್ಳಿತೆರೆಗೆ ಆಗಮಿಸಲು ದಿನಾಂಕ ನಿಗದಿಯಾಗಿದೆ.
ವಿಭಿನ್ನ ಸಿನಿಮಾ ಮೂಲಕ ಸಿನಿರಸಿಕರನ್ನು ರಂಜಿಸುತ್ತಿರುವ ನಿರ್ದೇಶಕ ಜಯತೀರ್ಥ ಸಾರಥ್ಯದಲ್ಲಿ ಪಂಚಭಾಷೆಯಲ್ಲಿ ಮೂಡಿ ಬರ್ತಿರುವ ಬನಾರಸ್ ಸಿನಿಮಾ ಬರುವ ನವೆಂಬರ್ 4ರಂದು ವಿಶ್ವಾದ್ಯಂತ ಮೆರವಣಿಗೆ ಹೊರಡಲಿದೆ. ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನಡಿ ಬನಾರಸ್ ಬಿಡುಗಡೆಯಾಗಲು ಸಜ್ಜಾಗ್ತಿದೆ. ಈಗಾಗಲೇ ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಾರಾಜಿಸಿವೆ. ಬಾಕ್ಸಾಫೀಸ್ ಧೂಳಿಪಟ ಮಾಡಿವೆ. ಈಗ ಇದೇ ಹಾದಿಯಲ್ಲಿ ಸಾಗುತ್ತಿರುವ ಬನಾರಸ್ ಸಿನಿಮಾ ಗೆಲುವಿನ ನಿರೀಕ್ಷೆಯಲ್ಲಿದೆ. ಅಂತಹ ಭರವಸೆಯನ್ನು ಚಿತ್ರ ಕೂಡ ಹುಟ್ಟುಹಾಕಿದೆ.
ಬನಾರಸ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಟ್ಟಿರುವ ಝೈದ್ ಖಾನ್ ಭರವಸೆ ನಾಯಕನಾಗಿ ನೆಲೆಯೂರಿರುವ ಸೂಚನೆ ಸಿಕ್ಕಿದೆ. ಬಿಡುಗಡೆಯಾಗಿರುವ ಮಯಾಗಂಗೆ ಹಾಡಿನಲ್ಲಿ ಝೈದ್ ಅಮೋಘ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇಡೀ ಸಿನಿಮಾ ಪೂರ್ತಿ ಝೈದ್ ಪ್ರೇಕ್ಷಕರನ್ನು ಆವರಿಸಿಬಿಡ್ತಾರೆ ಅನ್ನೋದು ಚಿತ್ರತಂಡದಲ್ಲಿ ಅಗಾಧ ನಂಬಿಕೆ ಇದೆ. ಝೈದ್ ಗೆ ಜೋಡಿಯಾಗಿ ಸೋನಲ್ ಮೊಂಥೆರೋ ನಟಿಸಿದ್ದಾರೆ. ಇವರ ಜೊತೆಗೆ ದೊಡ್ಡ ತಾರಾಬಳಗ, ತಿಲಕ್ ರಾಜ್ ನಿರ್ಮಾಣದಲ್ಲಿ ಅದ್ಧೂರಿತನವಾಗಿ ಚಿತ್ರ ಮೂಡಿಬಂದಿದೆ. ವಿಭಿನ್ನ ಕಥಾಹಂದರದ ಸುಳಿವು ನೀಡಿರುವ ಬನಾರಸ್ ಸಿನಿಮಾದ ಪ್ರಚಾರದ ಭರಾಟೆ ಶೀಘ್ರದಲ್ಲಿಯೇ ಶುರುವಾಗಿದೆ. ಸದ್ಯ ಬಿಡುಗಡೆ ದಿನಾಂಕ ಘೋಷಣೆ ಮಾಡಿರುವ ಚಿತ್ರತಂಡ ಚಿತ್ರಪ್ರೇಮಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಒಟ್ನಲಿ ಎಲ್ಲಾ ಬೆಳವಣಿಗೆ ನೋಡುತ್ತಿದ್ದರೆ ಬನಾರಸ್ ಈ ವರ್ಷದ ಮತ್ತೊಂದು ಯಶಸ್ವಿ ಚಿತ್ರವಾಗಿ ಮೂಡಿಬರುವುದು ಖಚಿತ.