ಬೆಂಗಳೂರು: 16 ವರ್ಷದೊಳಗಿನ ಎಲ್ಲಾ ಶಾಲಾ-ಕಾಲೇಜುಗಳ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧಿಸಬೇಕೋ ಅಥವಾ ನಿರ್ಬಂಧಿಸಬೇಕೋ ಎಂಬುದರ ಕುರಿತು ಪೋಷಕರು ಸೇರಿದಂತೆ ಎಲ್ಲರೊಂದಿಗೆ ಚರ್ಚಿಸಿ ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಮಂಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಮಾತನಾಡಿದ ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಕ್ಕಳಿಗೆ ಮೊಬೈಲ್ ಕೊಡದಿದ್ದರೆ ಆತ್ಮಹತ್ಯೆ ಹಾದಿ ತುಳಿಯುತ್ತಿದ್ದಾರೆ. ಮೊಬೈಲ್ ಚಟವು ರೋಗವಾಗಿ ಪರಿವರ್ತನೆಯಾಗುತ್ತಿದೆ. ಸರ್ಕಾರವು ಇದಕ್ಕೆ ನಿಯಂತ್ರಣ ಹೇರಬೇಕು ಎಂದರು.
ಸಚಿವ ಮಧು ಬಂಗಾರಪ್ಪ, ದೇಶದಲ್ಲಿ ಮೊದಲ ಬಾರಿಗೆ ಕರ್ನಾಟಕವು 16 ವರ್ಷದ ಎಲ್ಲಾ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿ ಮೊಬೈಲ್ ಬಳಕೆ ನಿಯಂತ್ರಣ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಮಾಹಿತಿ ತಂತ್ರಜ್ಞಾನ ಇಲಾಖೆಯು ಸಮಿತಿ ರಚಿಸಲಾಗಿದ್ದು, ಅವರಿಂದ ನೆರವು ಪಡೆಯಲಾಗುತ್ತಿದೆ. ಸಂಪೂರ್ಣವಾಗಿ ಮೊಬೈಲ್ ಬಳಕೆ ನಿಷೇಧಿಸಬೇಕೋ ಅಥವಾ ನಿರ್ಬಂಧಿಸಬೇಕೋ ಎಂಬುದರ ಬಗ್ಗೆ ಎಲ್ಲರೊಂದಿಗೆ ಕೂಲಂಕಷವಾಗಿ ಚರ್ಚಿಸಿ ಮುಂದಿನ ಅಧಿವೇಶನದ ವೇಳೆಗೆ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದರು.
ಇಂದಿನ ಎಐ ಯುಗದಲ್ಲಿ ಏಕಾಏಕಿ ಮೊಬೈಲ್ ಬಳಕೆ ನಿಷೇಧಿಸಲು ಅಸಾಧ್ಯ ಎಂಬ ವಾತಾವರಣ ನಿರ್ಮಾಣವಾಗಿದೆ. ಸಂವಹನಕ್ಕಾಗಿ ಮೊಬೈಲ್ ಬಳಕೆ ಆದರೆ ಸರಿ. ಆದರೆ ಸಮಾಜ ಹಾಳು ಮಾಡುವ ರೀತಿ ಇಂದು ಸಾಮಾಜಿಕ ಜಾಲತಾಣಗಳ ದುರ್ಬಳಕೆಯಾಗುತ್ತಿದೆ. ಮೊಬೈಲ್ ಬಳಕೆ ನಿಷೇಧ ನಿರ್ಧಾರ ಕೈಗೊಂಡರೆ ಮಕ್ಕಳು ತರಗತಿಗಳಿಗೆ ಮೊಬೈಲ್ ತರಬೇಕಾ? ಬೇಡ್ವಾ? ಇದರಿಂದ ಆಗುವ ಪ್ರತಿಕೂಲಗಳೇನು? ನಿರ್ಬಂಧ ವಿಧಿಸುವುದಾದರೆ ಏನೆಲ್ಲಾ ಮಾಡಬಹುದು ಎಂಬುದರ ಚರ್ಚಿಸಿ ಎಲ್ಲರ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ತಳೆಯಲಾಗುವುದು ಎಂದೂ ತಿಳಿಸಿದರು.








