ಡೆಹ್ರಾಡೂನ್: ಯೋಗ ಗುರು ರಾಮ್ದೇವ್ ಅವರ ದಿವ್ಯ ಫಾರ್ಮಸಿಯ ಮಧುಮೇಹ, ರಕ್ತದೊತ್ತಡ, ಗ್ಲುಕೋಮಾ ಮತ್ತು ಅಧಿಕ ಕೊಲೆಸ್ಟ್ರಾಲ್ಗೆ ಸಂಬಂಧಿಸಿದ ಐದು ಔಷಧಿಗಳ ಉತ್ಪಾದನೆಯನ್ನು ನಿಲ್ಲಿಸುವಂತೆ ಸೂಚಿಸಿದ್ದ ಆದೇಶವನ್ನು ಉತ್ತರಾಖಂಡದ ಆಯುರ್ವೇದ ಮತ್ತು ಯುನಾನಿ ಪರವಾನಗಿ ಪ್ರಾಧಿಕಾರವು ರದ್ದುಗೊಳಿಸಿದೆ.
ಹಿಂದಿನ ಆದೇಶವನ್ನು ತಿದ್ದುಪಡಿ ಮಾಡಿ, ಪ್ರಾಧಿಕಾರವು ಈ ಔಷಧಿಗಳ ಉತ್ಪಾದನೆಯನ್ನು ಮುಂದುವರಿಸಲು ಸಂಸ್ಥೆಗೆ ಅನುಮತಿ ನೀಡಿ ಆದೇಶ ಹೊರಡಿಸಿದೆ.
ನವೆಂಬರ್ 9ರ ಹಿಂದಿನ ಆದೇಶದಲ್ಲಿ ದೋಷವಿರುವುದನ್ನು ಗಮನಿಸಿದ ರಾಜ್ಯ ಆರೋಗ್ಯ ಪ್ರಾಧಿಕಾರದ ಔಷಧ ನಿಯಂತ್ರಕ ಜಿ.ಸಿ.ಎನ್.ಜಂಗಪಾಂಗಿ ತರಾತುರಿಯಲ್ಲಿ ಆದೇಶ ಹೊರಡಿಸಲಾಗಿದೆ. ಆದೇಶವನ್ನು ನೀಡುವ ಮೊದಲು ಕಂಪನಿಯು ತನ್ನ ನಿಲುವನ್ನು ವಿವರಿಸಲು ನಾವು ಸಮಯವನ್ನು ನೀಡಬೇಕಾಗಿತ್ತು ಎಂದು ಜಂಗ್ಪಾಂಗಿ ಹೇಳಿದ್ದಾರೆ.
ರಾಮ್ದೇವ್ ಅವರ ಆಪ್ತ ಸಹಾಯಕ ಆಚಾರ್ಯ ಬಾಲಕೃಷ್ಣ ಅವರು ತಪ್ಪನ್ನು ಸರಿಪಡಿಸಿದ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ರಾಧಿಕಾರವು ಹಿಂದಿನ ಆದೇಶದಲ್ಲಿ, ಐದು ಉತ್ಪನ್ನಗಳಾದ ಬಿಪಿಗ್ರಿಟ್, ಮಧುಗ್ರಿಟ್, ಥೈರೋಗ್ರಿಟ್, ಲಿಪಿಡಮ್ ಮಾತ್ರೆಗಳು ಮತ್ತು ಐಗ್ರಿಟ್ ಗೋಲ್ಡ್ ಮಾತ್ರೆಗಳ ಉತ್ಪಾದನೆಯನ್ನು ನಿಲ್ಲಿಸುವಂತೆ ದಿವ್ಯ ಫಾರ್ಮಸಿಗೆ ಹೇಳಿತ್ತು. ಪ್ರಾಧಿಕಾರವು ಅವುಗಳ ಪರಿಷ್ಕೃತ ಸೂತ್ರೀಕರಣ ವರದಿಯನ್ನು ಅನುಮೋದಿಸಿದ ನಂತರವೇ ಕಂಪನಿಯು ಈ ಉತ್ಪನ್ನಗಳ ತಯಾರಿಕೆಯನ್ನು ಪುನರಾರಂಭಿಸಬಹುದು ಎಂದು ಹಿಂದಿನ ಆದೇಶವು ಹೇಳಿದೆ.
ದಿವ್ಯಾ ಫಾರ್ಮಸಿ ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತು) ಕಾಯ್ದೆ ಮತ್ತು ಡ್ರಗ್ಸ್ ಮತ್ತು ಕಾಸ್ಮೆಟಿಕ್ ಕಾಯ್ದೆಯನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಕೇರಳದ ವೈದ್ಯ ಕೆವಿ ಬಾಬು ಅವರು ಸಲ್ಲಿಸಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿತ್ತು.