ಬೆಂಗಳೂರು : ರೈತರು ಹಾಗೂ ವಿತರಕರ ಕುಂದುಕೊರತೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಬಮೂಲ್ ಸಂಸ್ಥೆ ಸಹಾಯವಾಣಿಯನ್ನು ಆರಂಭಿಸಿದ್ದು, ಅಧ್ಯಕ್ಷರಾದ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ಮೊದಲ ಕರೆ ಸ್ವೀಕರಿಸಿ ಚಾಲನೆ ನೀಡಿದರು.
ಬೆಂಗಳೂರಿನ ಡೈರಿ ವೃತ್ತದ ಬಳಿ ಇರುವ ಬಮೂಲ್ ಕಚೇರಿಯಲ್ಲಿ ಸುರೇಶ್ ಅವರು ಶುಕ್ರವಾರ ಸಹಾಯವಾಣಿಗೆ ಚಾಲನೆ ನೀಡಿ ರೈತರು ಹಾಗೂ ವಿತರಕರ ಕರೆ ಸ್ವೀಕರಿಸಿ ಮಾತನಾಡಿದರು.
ವಿತರಕರು ಮಾಡಿದ ಕರೆ ಸ್ವೀಕರಿಸಿ ಅವರ ಅಹವಾಲು ಸ್ವೀಕರಿಸಿ ಅದಕ್ಕೆ ಸ್ಪಂದಿಸಿದರು. ಈ ವೇಳೆ “5 ಗಂಟೆಯೊಳಗೆ ನಿಮಗೆ ಹಾಲು ಪೂರೈಸಲು ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದ್ದು, ಮುಂದಿನ ಒಂದು ತಿಂಗಳ ಒಳಗಾಗಿ ನಿಮಗೆ ಸರಿಯಾದ ಸಮಯಕ್ಕೆ ಹಾಲು ತಲುಪಲಿದೆ” ಎಂದು ಭರವಸೆ ನೀಡಿದರು.
“ನೀವು ನಿತ್ಯ 10 ಲೀಟರ್ ಹಾಲು ಮಾರುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಿ. ನಿಮಗೆ ಅಗತ್ಯವಿರುವ ಪ್ರಮಾಣದ ಹಾಲು ಹಾಗೂ ಇತರೆ ಉತ್ಪನ್ನಗಳನ್ನು ನಾವು ಪೂರೈಕೆ ಮಾಡುತ್ತೇವೆ. ಕೇವಲ ಹಾಲಿನ ಮಾರಾಟದ ಬಗ್ಗೆ ಮಾತ್ರ ಗಮನ ಹರಿಸಬೇಡಿ, ನಂದಿನಿ ತುಪ್ಪ, ಸಿಹಿ ತಿನಿಸುಗಳನ್ನು ಮಾರಾಟ ಮಾಡುವತ್ತ ಹೆಚ್ಚು ಗಮನಹರಿಸಿ. ನಿಮಗೆ ಸ್ವಾತಂತ್ರ್ಯ ದಿನಾಚಾರಣೆ ಶುಭಾಶಯಗಳು” ಎಂದು ತಿಳಿಸಿದರು.