ಒಂದು ಸಿನೆಮಾ ಆರಂಭವಾದಾಗಿನಿಂದ ರಿಲೀಸ್ ತನಕವೂ ಸುದ್ದಿಯಲ್ಲೇ ಇರಬೇಕು ಅಂದ್ರೆ ಆ ಚಿತ್ರದ ಕಂಟೆಂಟ್ ಅಷ್ಟೇ ಗಟ್ಟಿಯಾಗಿರಬೇಕು. ಟೈಟಲ್, ಟೀಸರ್, ಟ್ರೈಲರ್, ಹಾಡುಗಳು ಹೀಗೆ ಚಿತ್ರತಂಡ ಒಂದೊಂದೇ ಝಲಕ್ ರಿಲೀಸ್ ಮಾಡಿ ಸಿನಿಪ್ರಿಯರನ್ನ ತನ್ನೆಡೆಗೆ ಸೆಳೆಯೋದು ಕಾಮನ್. ಆದ್ರೆ ಹೀಗೆ ಹೊರಹೊಮ್ಮಿದ ತುಣುಕುಗಳೂ ಕೂಡ ಪ್ರೇಕ್ಷಕರ ಮನಸಲ್ಲಿ ಹಚ್ಚೆ ಹಾಕಿ ಉಳಿಯಬೇಕು. ಆಗ ಮಾತ್ರ ಆ ಸಿನೆಮಾ ಅರ್ಧ ಗೆದ್ದಂತೆ ಎನ್ನಬಹುದು. ಅದರಲ್ಲೂ ಚಿತ್ರದ ಹಾಡುಗಳು ಮೊದಲು ಇಷ್ಟವಾದ್ರೆ ಆ ಸಿನೆಮಾಗೆ ರಿಲೀಸ್ ಗು ಮೊದಲು ಆ ಚಿತ್ರ ಅರ್ಧ ಯಶಸ್ಸು ಕಂಡಂತೆಯೇ. ಈ ತರಹದ ಭಾರಿ ಗೆಲುವಿನಲ್ಲಿ ದೇಶ ವಿದೇಶಗಳಲ್ಲೂ ಸುದ್ದಿ ಮಾಡುತ್ತಿರುವ ಚಿತ್ರವೇ ನವರಸ ನಾಯಕ ಜಗ್ಗೇಶ್ ನಟನೆಯ ‘ತೋತಾಪುರಿ’.
ತೋತಾಪುರಿ… ಹೀಗೆ ಟೈಟಲ್ ಮೂಲಕವೇ ಸೆಳೆದು ತದ ನಂತ್ರ ರಿಲೀಸ್ ಆದ ಒಂದೇ ಹಾಡಿನ ಮೂಲಕ ಸಿನಿಪ್ರಿಯರನ್ನ ಭದ್ರವಾಗಿ ಕಾಪಾಡಿಕೊಂಡು ತನ್ನಲ್ಲೇ ಸೆಳೆದು ಹಿಡಿದಿಟ್ಟಿರುವ ಚಿತ್ರವಿದು. ಬಾಗ್ಲು ತೆರಿ ಮೇರಿ ಜಾನ್ ಹಾಡು ಅದೆಷ್ಟು ನೆಚ್ಚಿಕೊಂಡಿದ್ದಾರೆಂದರೆ ಸಿನೆಮಾ ಯಾವಾಗ ರಿಲೀಸ್ ಆಗತ್ತೋ ಅಷ್ಟು ವರ್ಷ ಕಾದು ಚಿತ್ರ ಕಣ್ತುಂಬಿಸಿಕೊಳ್ಳೋ ಕಾತುರದಿಂದ ಕಾಯುವಷ್ಟು. ಹೌದು ಬರೀ ಹಾಡಲ್ಲ, ಚಿತ್ರದ ನಿರ್ದೇಶಕ, ತಾರಾಬಳಗವೂ ತೋತಾಪುರಿಗೆ ಹೇಳಿಮಾಡಿಸಿದಂತಿದೆ. ನವರಸ ನಾಯಕ ಜಗ್ಗೆಶ್ ಅಂದ್ರೆ ಅಲ್ಲಿ ಕಾಮಿಡಿಗೆ ಕೊರತೆ ಇಲ್ಲ, ನಿರ್ದೇಶಕ ವಿಜಯ್ ಪ್ರಸಾದ್ ಅಂದ್ರೆ ತಮ್ಮದೇ ಆದ ಓನ್ ಸ್ಟ್ರೈಲ್ ಸಿನೆಮಾ ಮೇಕಿಂಗ್ ಜೊತೆಗೆ ಹಾಸ್ಯದೊಂದಿಗೆ ಚೇಷ್ಟೆಯಂತೂ ಪಕ್ಕಾ ಅನ್ನೋ ಕಾನ್ಫಿಡೇನ್ಸ್ ಇದ್ದೇ ಇರತ್ತೆ.
ಯಾಕಂದ್ರೆ ಈಗಾಗಲೇ ನಿರ್ ದೋಸೆ ಚಿತ್ರದ ಮೂಲಕ ಇವರಿಬ್ಬರ ಕಾಂಬಿನೇಷನ್ ಗೆದ್ದಿರೋದ್ರಿಂದ ತೋತಾಪುರಿಯಲ್ಲಿನ ಹಾಸ್ಯದ ಗಮ್ಮತ್ತು ಮತ್ತು ಚೇಷ್ಟೆಯ ಪೀಟಿಕೆಗಾಗಿ ಅಭಿಮಾನಿಗಳು ಕಾದಿದ್ದಾರೆ.ಇನ್ನುಳಿದಂತೆ ಡಾಲಿ ಧನಂಜಯ್, ಅದಿತಿ ಪ್ರಭುದೇವ, ವೀಣಾ ಸುಂದರ್, ಸುಮನ್ ರಂಗನಾಥ್, ದತ್ತಣ್ಣ,ಹೇಮಾ ದತ್ ಸೇರಿದಂತೆ ನಗಿಸುವ ದೊಡ್ಡ ತಾರಾಗಣವೇ ತೋತಾಪುರಿ ಚಿತ್ರದಲ್ಲಿದೆ.
ಈ ಕಾಯುವಿಕೆ, ಚಿತ್ರದ ಇಷ್ಟೊಂದು ಸುದ್ದಿಗಳು ಬಿಸಿ ಬಿಸಿ ಚಹಾದಂತೆ ಸೇಲ್ ಆಗ್ತಿರೋದು ಕೇವಲ ಭಾರತದಲ್ಲಿ ಮಾತ್ರವಲ್ಲ. ದೇಶ ವಿದೇಶಗಳಲ್ಲೂ ನವರಸನಾಯಕನ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಬಾಗ್ಲು ತೆರಿ ಮೇರಿ ಜಾನ್ ಹಾಡನ್ನ ನೋಡಿದ್ಮೆಂತೂ ಇನ್ನೂ ಎಕ್ಸೈಟ್ ಮೆಂಟ್ ತೋರಿಸುತ್ತಿದ್ದಾರೆ ಈ ತೋತಾಪುರಿಯ ಬಗ್ಗೆ. ಸಧ್ಯ ಈ ಹಾಡೀಗ ಅದೆಷ್ಟು ಫೇಮಸ್ ಅಂದ್ರೆ ೨೦೦ ಮೀಲಿಯನ್ ವೀಕ್ಷಣೆಗೊಳಪಟ್ಟು ಇನ್ನೂ ಮುಂದೆ ಸಾಗುತ್ತಲೇ ಇದೆ. ಕಲರ್ ಫುಲ್ ಸೆಟ್ ನೊಂದಿಗೆ ಹಾಡಿಗೆ ತಕ್ಕಂತೆ ಮಾಡಿದ ಹಾಸ್ಯ ಭರಿತ ವೆನಿಸೋ ನೃತ್ಯ ಗಳ ಹೊಂದಿರೋ ಈ ಕಚಗುಳಿಯ ಹಾಡು ಮೋನಿಫ್ಲಿಕ್ಸ್ ಯೂ ಟ್ಯೂಬ್ ಚಾನಲ್ ನಲ್ಲಿ ರಿಲೀಸ್ ಆಗಿದ್ದು, ಕ್ಷಣ ಕ್ಷಣಕ್ಕೂ ವೀವರ್ಸ್ ಗಳ ಸಂಖ್ಯೆಯ ಹೆಚ್ಚಳದೊಂದಿಗೆ ಟ್ರೆಂಡ್ ಸೆಟ್ ಮಾಡಿದೆ.
ಈ ನ್ಯೂಸ್ ಈಗ ಚಿತ್ರದ ಹಾಗು ಚಿತ್ರ ತಂಡದ ಸಂಭ್ರಮಕ್ಕೆ ಕಾರಣವಾಗಿದೆ.ಸೋಶಿಯಲ್ ಮೀಡಿಯಾ ಓಪನ್ ಮಾಡ್ತಿದ್ದಂತೆ ಇದೇ ಹಾಡನ ರೀಲ್ಸ್,ಡ್ಯಾನ್ಸ್ ಎದುರಾಗುವಷ್ಟು ನೆಚ್ಚಿಕೊಂಡಿದ್ದಾರೆಂದರೆ ತಪ್ಪಿಲ್ಲ . ಇನ್ನು ಬಾಗ್ಲು ತೆಗಿ ಮೆರಿ ಜಾನ್ ಹಾಡಿಗೆ ವಿಜಯ್ ಪ್ರಸಾದ್ ಅವರದ್ದೇ ಸಾಹಿತ್ಯವಿದ್ದು, ಅನೂಪ್ ಸೀಳಿನ್ ಸಂಗೀತ ನೀಡಿದ್ದು, ವ್ಯಾಸರಾಜ ಸೋಸಲೆ ಹಾಗೂ ಅನನ್ಯಾ ಭಟ್ ಕಂಠಸಿರಿಯಲ್ಲಿ ಹಾಡು ಕೇಳುಗರ ಕಿವಿಗೆ,ನೋಡುಗರ ಮನಸ್ಸಿಗೆ ಹಾಯ್ ಭಾವನೆ ನೀಡಿದೆ.
ಸುರೇಶ್ ಆರ್ಟ್ಸ್ ಪ್ರೈವೇಟ್ ಲಿಮಿಟೇಡ್ ಬ್ಯಾನರ್ ಅಡಿ ನಿರ್ಮಾಣವಾದ ಈ ಚಿತ್ರಕ್ಕೆ ಕೆ. ಎ ಸುರೇಶ್ ನಿರ್ಮಾಪಕರು. ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ತೋತಾಪುರಿ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಿಲೀಸ್ ಆಗುತ್ತಿದೆ. ಕಾಮಿಡಿ ಜಾನರ್ ನಲ್ಲಿ ಆರಂಭವಾದ ಮೊದಲ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಿಲೀಸ್ ಆಗುತ್ತಿರುವ ಹೊಸ ದಾಖಲೆಯೊಂದಿಗೆ, ದೇಶ ವಿದೇಶಗಳಲ್ಲೂ ಹಾಡನ್ನ ನೆಚ್ಚಿ ಬರ್ತಿರೋ ಅಭಿಪ್ರಾಯಗಳ ಖುಷಿ ತಂಡಕ್ಕೆ ಮತ್ತಷ್ಟು ಹುರುಪು ನೀಡಿರೋದಂತು ನಿಜ.