ಬಾಗಲಕೋಟೆ : ಹಳೆ ದ್ವೇಷದ ಹಿನ್ನೆಲೆಯಲ್ಲಿ ಕುಟುಂಬವೊಂದನ್ನು ನಾಶಪಡಿಸಲು ಗುಡಿಸಲಿಗೆ ಪೆಟ್ರೋಲ್ ಸಿಂಪಡಣೆ ಬೆಂಕಿ ಹಚ್ಚಿದ ಪರಿಣಾಮ ಒಂದೇ ಕುಟುಂಬದ ಇಬ್ಬರು ಸಜೀವ ದಹನವಾಗಿದ್ದು, ಮೂವರು ಪ್ರಾಣಾಪಾಯದಿಂದ ಪಾರಾದ ಘಟನೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಬಳಿಯ ಬೆಳಗಲಿಯಲ್ಲಿ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಹೌದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಬಳಿಯ ಬೆಳಗಲಿಯಲ್ಲಿ ಕಳೆದ ಜುಲೈ 15 ರಂದು ನಸುಕಿನ ಜಾವ ಬೆಳಗಲಿ ಸರಹದ್ದಿನ ಪೆಂಡಾರಿ ಮುಲ್ಲಾ ತೋಟದ ಮನೆಯ ಮಾಲೀಕ ದಸ್ತಗಿರಸಾಬ.ಮೌ.ಪೆಂಡಾರಿ ಅವರ ಮನೆಗೆ ದುಷ್ಕರ್ಮಿಗಳು ಈ ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಪೆಂಡಾರಿ ಕುಟುಂಬದ ಜೈಬುನ್ ದಸ್ತಗೀರಸಾಬ ಪೆಂಡಾರಿ (55), ಶಬಾನಾ ದಸ್ತಗೀರಸಾಬ ಪೆಂಡಾರಿ (26) ಸಜೀವ ದಹನಗೊಂಡಿದ್ದಾರೆ.
ದುರುಳರು 1ಎಚ್ಪಿ ಮೋಟಾರ್ ಪಂಪ್ ಬಳಸಿ ಇಡೀ ಪತ್ರಾಸ್ (ತಗಡಿನ) ಶೆಡ್ಗೆ ಪೆಟ್ರೋಲ್ ಸಿಂಪಡಣೆ ಮಾಡಿದ್ದಾರೆ. ಪೆಟ್ರೋಲ್ ವಾಸನೆ ಬರುತ್ತಿದ್ದಂತೆ ದಸ್ತಗೀರಸಾಬ, ಆತನ ಪುತ್ರ ಮತ್ತು ಮೊಮ್ಮಗ ಮೂವರು ಹೊರಗೆ ಓಡಿ ಬಂದಿದ್ದಾರೆ. ಇದೆ ವೇಳೆ ದುಷ್ಕರ್ಮಿಗಳು ಅವರಿಗೂ ಪೆಟ್ರೋಲ್ ಸಿಂಪಡಣೆ ಮಾಡಿ ಬೆಂಕಿ ಹಚ್ಚಿದ್ದಾರೆ.
ಈ ವೇಳೆ ತಮಗೆ ಹೊತ್ತಿದ್ದ ಬೆಂಕಿ ನಂದಿಸಿಕೊಂಡು ಮನೆಗೆ ಹೊತ್ತಿದ್ದ ಬೆಂಕಿ ನಂದಿಸಲು ದಸ್ತಗೀರಸಾಬ ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ ದಸ್ತಗೀರಸಾಬ ಅವರ ಪತ್ನಿ ಮತ್ತು ಪುತ್ರಿ ಇಬ್ಬರೂ ಮನೆಯೊಳಗೆ ಸಜೀವ ದಹನವಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಮಾಲೀಕ ದಸ್ತಗಿರಸಾಬ.ಮೌ.ಪೆಂಡಾರಿಗೆ ಶೇ.20 ರಷ್ಟು ಸುಟ್ಟುಗಾಯವಾಗಿದ್ದು, ಈತನ ಪುತ್ರ ಸುಭಾನ.ದ.ಪೆಂಡಾರಿಗೆ ಶೇ.75 ರಷ್ಟು ಸುಟ್ಟ ಗಾಯಗಳಾಗಿವೆ. ಮೊಮ್ಮಗ ಸಿದ್ದಿಕ ಶೌಕತ್ ಪೆಂಡಾರಿ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಘಟನಾ ಸ್ಥಳದಲ್ಲಿ ಶ್ವಾನ ದಳ, ಬೆಳಗಾವಿ ಜಿಲ್ಲಾ ಎಫ್.ಎಸ್.ಎಲ್ ತಂಡ ಸಾಕ್ಷ್ಯಗಳನ್ನು ಕಲೆ ಹಾಕಿತು.