ಮಂಡ್ಯ : ಮಳವಳ್ಳಿ ಪಟ್ಟಣದಲ್ಲಿ ನಡೆಯಲಿರುವ ಸುತ್ತೂರಿನ ಶಿವರಾತ್ರಿ ಶಿವಯೋಗಿಗಳರವರ 1066ನೇ ಜಯಂತಿ ಮಹೋತ್ಸವ ಉದ್ಘಾಟನೆಗೆ ಡಿ.17 ರಂದು ರಾಷ್ಟ್ರಪತಿ ದ್ರೌಪತಿ ಮುರ್ಮು ಆಗಮಿಸಲಿದ್ದಾರೆ. ಈ ಹಿನ್ನೆಲೆ ಹೆಲಿಪ್ಯಾಡ್, ವೇದಿಕೆ ಹಾಗೂ ಇತರೆ ಸ್ಥಳಗಳನ್ನು ಮೈಸೂರು ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ, ಜಿಲ್ಲಾಧಿಕಾರಿ ಡಾ. ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಟ್ಟಣದ ಹೊರ ಭಾಗದ ಮಾರೇಹಳ್ಳಿ ಬಳಿ ನಿರ್ಮಿಸುತ್ತಿರುವ ಹೆಲಿಪ್ಯಾಡ್‌ಗೆ ತೆರಳಿ ಗ್ರೀನ್ ರೂಂ ನಿರ್ಮಾಣ, ವಿದ್ಯುತ್ ಕಂಬಗಳ ತೆರವು, ಜಾಗ ಸಮತಟ್ಟಾಗಿಸುವುದು, ಕಾರ್ಯಕ್ರಮಕ್ಕೆ ರಾಷ್ಟ್ರಪತಿಗಳನ್ನು ತೆರಳುವ ಮಾರ್ಗ, ಮೂಲಭೂತ ಸೌಲಭ್ಯಗಳ ಅಳವಡಿಕೆ ಕುರಿತು ತೆಗೆದುಕೊಂಡಿರುವ ಕ್ರಮಗಳ ಅಧಿಕಾರಿಗಳು ಚರ್ಚೆ ನಡೆಸಿದರು.
ಡಿ.17ರಿಂದ 22 ರವರಗೆ ನಡೆಯಲಿರುವ ಜಯಂತೋತ್ಸವಕ್ಕೆ ರಾಷ್ಟ್ರಪತಿಗಳು, ಮುಖ್ಯಮಂತ್ರಿಗಳು ಹಾಗೂ ರಾಜ್ಯ ಸಚಿವರು ಕಾರ್ಯಕ್ರಮಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಗಣ್ಯ ವ್ಯಕ್ತಿಗಳ ವಾಸ್ತವ್ಯಕ್ಕೆ ತಾಲೂಕು ವ್ಯಾಪ್ತಿಯ ಎಲ್ಲಾ ಲಾಡ್ಜ್, ಕಲ್ಯಾಣ ಮಂಟಪಗಳ, ರೆಸಾರ್ಟ್, ರೂಮುಗಳನ್ನು ಕಾಯ್ದಿರಿಸುವುದು, ಕಾನೂನು ಸುವ್ಯವಸ್ಥೆಗೆ ತೊಂದರೆ ಬರದಂತೆ ಫ್ಲೆಕ್ಸ್ ಬ್ಯಾನರ್ ಅಳವಡಿಕೆ, ಸೂಕ್ತ ಪೊಲೀಸ್ ಬಂದೋಬಸ್ ವ್ಯವಸ್ಥೆ ಕುರಿತು ಎಚ್ಚರಿಕೆ ವಹಿಸಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಸಲಹೆ ನೀಡಿದರು.








