ಉಡುಪಿ : ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಖಾಕಿ ಸರ್ಪಗಾವಲು ಹಾಕಿದೆ. ಪ್ರಧಾನಿ ಸ್ವಾಗತಕ್ಕೆ ನಗರ ಸಿದ್ಧವಾಗಿದೆ. ಬನ್ನಂಜೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪದಿಂದ ಕಲ್ಸಂಕದವರೆಗೂ ಪ್ರಧಾನಿ ರೋಡ್ ಶೋ ನಡೆಯಲಿದ್ದು, ಎರಡು ಕಡೆಗಳಲ್ಲೂ ಬ್ಯಾರಿಕೇಡ್ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಈ ರಸ್ತೆಯ ಎರಡೂ ಬದಿಗಳಲ್ಲಿರುವ ಅಂಗಡಿ ಮಾಲೀಕರಿಗೆ ಅಂದು ಅಂಗಡಿ ತೆರೆಯದಂತೆ ಸೂಚನೆಯನ್ನು ಜಿಲ್ಲಾಡಳಿತ ರವಾನಿಸಿದೆ.
ಪ್ರಧಾನಿ ನರೇಂದ್ರ ಮೋದಿಯವರ ಆಗಮನದ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲೂ ತುಸು ವ್ಯತ್ಯಾಸ ಆಗಲಿದೆ. ನ.28ಕ್ಕೆ ಸೀಮಿತವಾಗಿ ಉಡುಪಿ ನಗರ, ಮಲ್ಪೆ ಹಾಗೂ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








