ಶಿವಮೊಗ್ಗ: ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರ ಎನ್.ಡಿ.ಎ. ಸರ್ಕಾರ ಸರಳೀಕೃತ ಜಿ.ಎಸ್.ಟಿ. 2.0 ರ ವ್ಯವಸ್ಥೆ ಜಾರಿ ಮಾಡಿರುವುದನ್ನು ಸ್ವಾಗತಿಸಿ ಇಂದು ಶಿವಮೊಗ್ಗದ ಅಂಗಡಿ- ಮಳಿಗೆಗಳಿಗೆ ತೆರಳಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ಎರಡು ಸ್ಲ್ಯಾಬ್ ಜಿಎಸ್‍ಟಿ ಜಾರಿಗೊಳಿಸಿದ್ದಾರೆ. ಈ ಮೂಲಕ ಜನರಿಗೆ ದೀಪಾವಳಿ ಉಡುಗೊರೆ ನೀಡಿದ್ದಾರೆ. ಅದಕ್ಕಾಗಿ ಆದರಣೀಯ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಮತ್ತು ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಬಿಜೆಪಿ ಅಭಿನಂದಿಸುತ್ತದೆ. ಜನತೆಯ ಪರವಾಗಿ ಕೇಂದ್ರ ಸರಕಾರಕ್ಕೆ ಧನ್ಯವಾದ ಸಮರ್ಪಿಸಲು ಈ ಸಂಭ್ರಮಾಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಜಗತ್ತಿನ ದೊಡ್ಡಣ್ಣ ಅಮೇರಿಕದ ಅಧ್ಯಕ್ಷ ಟ್ರಂಪ್ ಅವರು ಬೇರೆ ಬೇರೆ ದೇಶಗಳಿಗೆ ತೆರಿಗೆಯನ್ನು ಹೆಚ್ಚಿಸಿರುವುದನ್ನು ನಾವು ನೋಡಿದ್ದೇವೆ. ಇಂದು ಭಾರತಕ್ಕೆ ದೊಡ್ಡ ಸವಾಲನ್ನು ಹಾಕಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರು ಭಾರತ ಯಾವುದಕ್ಕೂ ಜಗ್ಗುವುದಿಲ್ಲ ಮತ್ತು ಬಗ್ಗುವುದಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ಅಧಿಕಾರ ಗಳಿಸಿಕೊಳ್ಳುವ ಸಲುವಾಗಿ ಗರೀಬಿ ಹಟಾವೋ ಎಂಬ ಘೋಷಣೆಯೊಂದಿಗೆ ಅನೇಕ ಚುನಾವಣೆಯನ್ನು ಗೆದ್ದುಕೊಂಡು ಬಂದಿತ್ತು. ಆದರೆ ಚುನಾವಣೆ ಗೆದ್ದರೇ ಹೊರತು ಈ ದೇಶದಲ್ಲಿ ಬಡತನ ನಿರ್ಮೂಲನೆ ಮಾಡಲು ಸಾಧ್ಯವಾಗಲಿಲ್ಲ ಎಂದು ಟೀಕಿಸಿದರು. ಇಂದು ಭಾರತ ಸ್ವಾವಲಂಬಿ ಭಾರತ ಆಗಬೇಕು; ಭಾರತ ಸಮೃದ್ಧಿ ರಾಷ್ಟ್ರವಾಗಿ ಪರಿವರ್ತನೆ ಆಗಬೇಕು; ಅದಕ್ಕಾಗಿ ಸ್ವದೇಶಿ ವಸ್ತುಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಮನವಿ ಮಾಡಿದರು.
ಎಲ್ಲ ವಿಚಾರಗಳನ್ನು ಸಮಗ್ರವಾಗಿ ಯೋಚನೆ ಮಾಡಿ, ಜಾಗತಿಕ ಸವಾಲುಗಳನ್ನು ನಾವು ಎದುರಿಸಬೇಕು; ಭಾರತ 2047 ಕ್ಕೆ ಅಭಿವೃದ್ಧಿಶೀಲ ದೇಶವಾಗಿ ಪರಿವರ್ತನೆ ಹೊಂದಬೇಕು; ವಿಕಸಿತ ಭಾರತವಾಗಿ ಪರಿವರ್ತನೆ ಆಗಬೇಕು ಎಂಬ ದೃಷ್ಟಿಕೋನವನ್ನು ಇಟ್ಟುಕೊಳ್ಳಬೇಕು ಎಂದು ತಿಳಿಸಿದರು.
ವಿಧಾನಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಶಿವಮೊಗ್ಗ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ನಗರ ಮಂಡಲ ಅಧ್ಯಕ್ಷ ಮೋಹನ್ ರೆಡ್ಡಿ ಹಾಗೂ ಕಾರ್ಯಕರ್ತರು ಇದ್ದರು.
40 ವರ್ಷ ತುಂಬಿದ ‘ತಗಡೂರು ಶಾಲೆ’ಯಲ್ಲಿ ಸಂಭ್ರಮ-ಸಡಗರ: ಆಕರ್ಷಿಸಿದ ಹಳೆ ವಿದ್ಯಾರ್ಥಿಗಳ ಸ್ನೇಹ-ಸಮ್ಮಿಲನ