ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಾಂತರ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಅಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಕೃಷ್ಣ ಭೈರೇಗೌಡ ಅವರು, ಈ ಒಂದು ಪ್ರಕರಣದಲ್ಲಿ ಬಂಧಿತರಾಗಿರುವ ನಾಗೇಂದ್ರಗೆ ED ಅಧಿಕಾರಿಗಳು ಸರ್ಕಾರದ ಪ್ರಮುಖರು ಭಾಗಿಯಾಗಿದ್ದಾರೆ ಎಂದು ಬಲವಂತದ ಹೇಳಿಕೆ ನೀಡಿ ಎಂದು ಹೆದರಿಸುತ್ತಿದ್ದಾರೆ ಎಂದು ಆರೋಪಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನಮನ್ನಣೆ ಕಳೆದುಕೊಂಡು ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಂಡು ದೇಶದಲ್ಲೂ ಸಹ ಲೋಕಸಭೆ ಚುನಾವಣೆಯಲ್ಲಿ ದುರ್ಬಲವಾಗಿರುವಂತಹ ಬಿಜೆಪಿಯು ಮೊದಲಿನಿಂದಲೂ ಸಹ ವಾಮ ಮಾರ್ಗಗಳನ್ನು ಬಳಸಿ ವಿರೋಧ ಪಕ್ಷಗಳ ಸರ್ಕಾರಗಳನ್ನು ಬುಡಮೇಲು ಮಾಡಿ ತನ್ನ ಏಕ ಪಕ್ಷ ಸಾಮ್ರಾಜ್ಯವನ್ನು ದೇಶದಲ್ಲಿ ಕಟ್ಟಿರುವಂತಹ ಪ್ರಯತ್ನ ಮಾಡಿರುವುದು ಬೇಕಾದಷ್ಟು ಉದಾಹರಣೆಗಳಿವೆ.
ಇದಕ್ಕೆ ಇಡಿ, ಐಟಿ, ಸಿಬಿಐ ಬಳಸಿಕೊಂಡು ವಿರೋಧ ಪಕ್ಷಗಳ ಮೇಲೆ ನೇರ ದಾಳಿಗಳನ್ನು ಮಾಡುತ್ತಾ ಬಂದಿದ್ದಾರೆ. ಇಡಿ ಐಟಿ ಸಿಬಿಐ ಗಳನ್ನು ಸರ್ಜಿಕಲ್ ಸ್ಟ್ರೈಕ್ ತರ ವಿರೋಧ ಪಕ್ಷಗಳ ಮೇಲೆ ದಾಳಿ ಮಾಡಿಸುತ್ತ ಬಂದಿದ್ದಾರೆ. ಅದರ ಮುಂದುವರಿದ ಭಾಗವಾಗಿ ಕರ್ನಾಟಕದಲ್ಲೂ ಕೂಡ ಹತಾಶೆಯ ಮನೋಭಾವದಿಂದ 2019 ರಲ್ಲಿ ಅಪರೇಷನ್ ಕಮಲ ಮಾಡಿ ಇಲ್ಲಿದ್ದಂತಹ ಸರ್ಕಾರವನ್ನು ಬುಡಮೇಲು ಮಾಡಿದರು.
ಅದೇ ರೀತಿ ಈ ಬಾರಿ ಆ ರೀತಿ ಮಾಡೋದಕ್ಕೆ ಆಗುವುದಿಲ್ಲ ಅಂತ ಹೇಳಿ ಇಂತಹ ಇಲಾಖೆಗಳನ್ನ ಬಳಸಿಕೊಂಡು ಇವತ್ತು ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಬುಡಮೇಲು ಮಾಡುವಂತಹ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ತನಿಖೆ ಇಡಿ ಅವರು ಈಗಾಗಲೇ ಮಾಡುತ್ತಿದ್ದಾರೆ. ನಮಗೆ ಖಚಿತವಾದಂತಹ ಮಾಹಿತಿ ಬಂದಿದೆ. ಅದಕ್ಕೆ ಬೇಕಾದಂತಹ ಪುರಾವೆಗಳನ್ನು ಮುಂದಿನ ದಿನಗಳಲ್ಲಿ ನಾವು ಅದನ್ನು ಬಹಿರಂಗ ಪಡಿಸುತ್ತೇವೆ. ತನಿಖೆ ನಡೆಯುವಂತಹ ಸಂದರ್ಭದಲ್ಲಿ ಯಾರು ತನಿಖೆಗೆ ಒಳಪಟ್ಟಿದ್ದಾರೋ ಅವರ ಮೇಲೆ ಒತ್ತಡ ತಂದು ಸರ್ಕಾರದಲ್ಲಿರುವ ಪ್ರಮುಖರ ಅಧಿಕಾರಿಗಳ ಹೆಸರುಗಳನ್ನು ಹೇಳಿ ಎಂದು ಹೆದರಿಸುತ್ತಿದ್ದಾರೆ.
ತಾವು ಹೇಳಬೇಕು ನೀವು ಹೇಳದೆ ಹೋದರೆ ಇಡಿ ಪವರ್ ಏನು ಅನ್ನೋದು ಗೊತ್ತಿಲ್ಲ. ನೀವು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತೀರ ನೀವು ಬಚಾವಾಗಬೇಕಾದರೆ ಉನ್ನತ ಮಟ್ಟದಲ್ಲಿ ಇರುವವರು ಕೂಡ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿಕೆ ಕೊಡಿ ಎಂದು ಇಡಿ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ತನಿಖೆ ತಪ್ಪು ದಾರಿಗೆ ಕೊಂಡೊಯ್ದು ಇದು ಕೇವಲ ಒಂದು ಚುನಾಯಿತ ಪ್ರಜಾಪ್ರಭುತ್ವದ ಸರ್ಕಾರವನ್ನು ಬುಡಮೇಲೂ ಮಾಡುವುದಕ್ಕೆ ಕೇಂದ್ರ ಸರ್ಕಾರ ಇಡಿ ಬಳಸುತ್ತಿದ್ದಾರೆ. ಇದರಲ್ಲಿ ನಿಜವಾಗಿ ತಪ್ಪಿತಸ್ಥರನ್ನು ಬಂಧಿಸುವ ಕೆಲಸ ಮಾಡುತ್ತಿಲ್ಲ ಎಂದರು.
ಕೇಂದ್ರ ಸರ್ಕಾರದ ಜೊತೆ ED ಸಂಧಾನ ಮಾಡಿಕೊಂಡು ಅವರ ಜೊತೆಗೆ ಹೊಂದಿಕೊಂಡು ನಾವು ಹೇಳಿದ ಹಾಗೆ ಕೇಳಲಿಲ್ಲ ಅಂದರೆ ಸರ್ಕಾರದ ಪ್ರಮುಖರ ಹೆಸರನ್ನು ಹೇಳಬೇಕು ಒಂದು ವೇಳೆ ಹೇಳದ್ದೇ ಹೋದರೆ ಇಡೀ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿ ಇರುವಂತಹ ಅಧಿಕಾರಿಗಳ ಹೆಸರು ಹೇಳಿಸುವಂತಹ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿದರು. ಇದೆ ವೇಳೆ ಸಚಿವರಾದ ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಸಿಎಂ ಕಾನೂನು ಸಲಹೆಗಾರರ ಪೊಣ್ಣನ್ನ ಸೇರಿದಂತೆ ಇತರರಿದ್ದರು.