ಕೇರಳ : ಭಾರತ್ ಮಾತಾ ಕಿ ಜೈ ಹಾಗೂ ಜೈ ಹಿಂದ್ ಎಂಬ ಘೋಷಣೆ ಕೊಟ್ಟಿದ್ದೆ ಅಜೀಮುಲ್ಲಾ ಖಾನ್ ಹಾಗಾಗಿ ಇದರ ಹಿಂದೆ ಮುಸ್ಲಿಂರ ಕೊಡುಗೆ ಇದೆ ಎಂದು ಸೋಮವಾರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನದ ವಿರುದ್ಧದ ರ‍್ಯಾಲಿಯಲ್ಲಿ ಮಾತನಾಡಿದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.
ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನು ಹುಟ್ಟುಹಾಕಿದವರು ಯಾರು? ಸಂಘಪರಿವಾರದ ನಾಯಕರೇ? ಇದು ಸಂಘಪರಿವಾರಕ್ಕೆ ತಿಳಿದಿದೆಯೇ ಎಂದು ನನಗೆ ಗೊತ್ತಿಲ್ಲ. ಆ ಘೋಷಣೆ ಕೊಟ್ಟವರ ಹೆಸರು ಅಜೀಮುಲ್ಲಾ ಖಾನ್, ಅವರು ಸಂಘಪರಿವಾರದ ನಾಯಕರಲ್ಲ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಮಾಜಿ ರಾಜತಾಂತ್ರಿಕ ಅಬಿದ್ ಹಸನ್ ಅವರು ಜೈ ಹಿಂದ್ ಎಂಬ ಪದವನ್ನು ಹುಟ್ಟುಹಾಕಿದ್ದಾರೆ. ಹಾಗಾಗಿ ಜೈ ಹಿಂದ್ ಮುಸ್ಲಿಮರ ಕೊಡುಗೆಯಾಗಿದೆ. ಮುಸ್ಲಿಮರು ಭಾರತ ಬಿಡಬೇಕು, ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಹೇಳುತ್ತಿರುವ ಸಂಘಪರಿವಾರ ಈ ಇತಿಹಾಸವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನಾನು ಹೇಳುತ್ತೇನೆ ಎಂದಿದ್ದಾರೆ ಪಿಣರಾಯಿ ವಿಜಯನ್.
ಅಜೀಮುಲ್ಲಾ ಖಾನ್ 19 ನೇ ಶತಮಾನದಲ್ಲಿ ಮರಾಠ ಪೇಶ್ವೆ ನಾನಾ ಸಾಹೇಬರಿಗೆ ಪ್ರಧಾನ ಮಂತ್ರಿಯಾಗಿದ್ದರು. ಅವರು ಭಾರತ್ ಮಾತಾ ಕಿ ಜೈ ಎಂಬ ಪದವನ್ನು ಸೃಷ್ಟಿಸಿದರು. ಈ ಘೋಷಣೆಯನ್ನು ಮುಸ್ಲಿಮರು ರೂಪಿಸಿದ್ದರಿಂದ ಸಂಘಪರಿವಾರವು ಅದನ್ನು ಪಠಿಸದಿರಲು ನಿರ್ಧರಿಸುತ್ತದೆಯೇ?ಸಿಎಎ ಅನುಷ್ಠಾನದ ಬಗ್ಗೆ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಿಜಯನ್ ವಾಗ್ದಾಳಿ ನಡೆಸಿದ್ದು, ಪ್ರಧಾನಿ ಧರ್ಮದ ಆಧಾರದ ಮೇಲೆ ಪೌರತ್ವವನ್ನು ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.