4 ವರ್ಷಗಳ ಹಿಂದೆ ರಾಮ ಜನ್ಮಭೂಮಿ ಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂ ಕೋರ್ಟಿನ ಸಂವಿಧಾನಿಕ ಪೀಠದ ಐವರು ನ್ಯಾಯಾಧೀಶರಿಗೆ ಜನವರಿ 22 ರಂದು ನಡೆಯುವ ಅಯೋಧ್ಯೆ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. 2019ರಲ್ಲಿ ಅಯೋಧ್ಯೆ ರಾಮ ಮಂದಿರದ ಪರವಾಗಿ ತೀರ್ಪು ನೀಡಿದ ಐವರು ನ್ಯಾಯಾಧೀಶರಾದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ಮಾಜಿ ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಝೀರ್, ಅಶೋಕ್ ಭೂಷಣ್ ಹಾಗೂ ಎಸ್ ಎ ಬೋಬ್ಡೆ ಅವರನ್ನು ಆಹ್ವಾನಿಸಲಾಗಿದೆ.
ಆಹ್ವಾನಿತರಲ್ಲಿ ಮಾಜಿ ಮುಖ್ಯ ನ್ಯಾಯಾಧೀಶರು, ನ್ಯಾಯಾಧೀಶರು, ಉನ್ನತ ವಕೀಲರು ಒಳಗೊಂಡು 50 ನ್ಯಾಯ ಶಾಸ್ತ್ರಜ್ಞರನ್ನು ಆಹ್ವಾನಿಸಲಾಗಿದೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಮಾಜಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಕೂಡ ಆಹ್ವಾನಿತರಲ್ಲಿ ಸೇರಿದ್ದಾರೆ. ಐವರ ಸಾಂವಿಧಾನಿಕ ಪೀಠವು ವಿವಾದಿತ ಜಾಗವನ್ನು ರಾಮ ಲಲ್ಲಾ ದೇಗುಲಕ್ಕೆ ನೀಡಿತ್ತು. ಅಲ್ಲದೆ ಮುಸ್ಲಿಂ ಅರ್ಜಿದಾರರಿಗೆ ಮಸೀದಿ ನಿರ್ಮಿಸಲು ಪರ್ಯಾಯವಾಗಿ ಐದು ಎಕರೆ ಭೂಮಿಯನ್ನು ನೀಡಬೇಕೆಂದು ಸರ್ಕಾರಕ್ಕೆ ಆದೇಶಿಸಿತ್ತು. ಈ ಐವರು ನ್ಯಾಯಾಧೀಶರಲ್ಲಿ ಮಾಜಿ ಸಿಜೆಐ ರಂಜನ್ ಗೊಗೋಯ್ ಅವರು ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿದ್ದಾರೆ. ಅಬ್ದುಲ್ ನಾಜೀರ್ ಅವರು ಆಂಧ್ರ ಪ್ರದೇಶದ ರಾಜ್ಯಪಾಲರಾಗಿದ್ದಾರೆ. ಡಿ ವೈ ಚಂದ್ರಚೂಡ್ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾಗಿದ್ದಾರೆ. ಉಳಿದ ಇಬ್ಬರು ನ್ಯಾಯಾಧೀಶರಾದ ಅಶೋಕ್ ಭೂಷಣ್ ಹಾಗೂ ಎಸ್ ಎ ಬೋಬ್ಡೆ ನಿವೃತ್ತರಾಗಿದ್ದಾರೆ. ದೇಗುಲ ಟ್ರಸ್ಟ್‌ನ ಮಾಹಿತಿಯಂತೆ ಜನವರಿ 22ರಂದು ನಡೆಯುವ ಪ್ರಾಣ ಪ್ರತಿಷ್ಠಾನ ಕಾರ್ಯಕ್ರಮದಲ್ಲಿ ರಾಜಕಾರಣಿಗಳು, ಸೆಲಬ್ರಿಟಿಗಳು, ಕೈಗಾರಿಕೋದ್ಯಮಿಗಳು, ಸಂತರು ಒಳಗೊಂಡು 7 ಸಾವಿರ ಮಂದಿ ಭಾಗವಹಿಸಲಿದ್ದಾರೆಯಾಗಿದೆ.